ಮುಂಬಯಿ: ಬ್ರೆಝಿಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ನೇಯ್ಮರ್(Neymar) ಅವರು ಮುಂದಿನ ವರ್ಷ ನಡೆಯುವ ಕೋಪಾ ಅಮೆರಿಕ ಟೂರ್ನಿಯಿಂದ(Copa America 2024) ಹೊರಬಿದ್ದಿದ್ದಾರೆ. ವಿಶ್ವಕಪ್ ಅರ್ಹತಾ ಪಂದ್ಯದ(2026 World Cup qualifying match) ವೇಳೆ ಎಡ ಮೊಣಕಾಲು ಗಾಯಕ್ಕೀಡಾಗಿದ್ದ ನೇಮರ್ ಕಳೆದ ತಿಂಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ನೇಯ್ಮರ್ ಮೊಣಕಾಲಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಕನಿಷ್ಠ 6 ತಿಂಗಳು ಬೇಕಾಗಬಹುದು. ಹೀಗಾಗಿ ಅವರು ಕೋಪಾ ಅಮೆರಿಕ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ರಾಷ್ಟ್ರೀಯ ತಂಡದ ವೈದ್ಯ ರೋಡ್ರಿಗೊ ಲಾಸ್ಮರ್ ಸ್ಪಷ್ಟಪಡಿಸಿದ್ದಾರೆ. ಕೂಪಾ ಅಮೆರಿಕ ಫುಟ್ಬಾಲ್ ಟೂರ್ನಿ ಮುಂದಿನ ವರ್ಷದ ಜೂನ್ 20ರಿಂದ ಜುಲೈ 14ರ ತನಕ ನಡೆಯಲಿದೆ.
ನೇಯ್ಮರ್ ಇದೇ ವರ್ಷದ ಆಗಸ್ಟ್ನಲ್ಲಿ ಸೌದಿ ಪ್ರೊ ಲೀಗ್ ತಂಡ ಅಲ್-ಹಿಲಾಲ್ಗೆ ಸೇರಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಅವರು ತಂಡದ ಪರ ಕೇವಲ 5 ಪಂದ್ಯಗಳನ್ನು ಮಾತ್ರ ಆಡಿದ್ದರು. ಬ್ರೆಝಿಲ್ ತಂಡ ಕೋಪಾ ಅಮೆರಿಕ ಟೂರ್ನಿಯಲ್ಲಿ ಕೊಲಂಬಿಯಾ, ಪೆರುಗ್ವೆ ಹಾಗೂ ಕ್ವಾಲಿಫೈಯರ್ ತಂಡದೊಂದಿಗೆ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಗೆಳತಿ ಜತೆ ನೇಯ್ಮರ್ ಬ್ರೇಕಪ್
ಕೆಲ ದಿನಗಳ ಹಿಂದಷ್ಟೇ ನೇಯ್ಮರ್ ಅವರು ತಮ್ಮ ಗರ್ಲ್‌ಫ್ರೆಂಡ್ ಬ್ರೂನಾ ಬಿಯಾಂಕಾರ್ಡಿ (Bruna Biancardi) ಜತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಬ್ರೆಜಿಲ್ ರೂಪದರ್ಶಿ ಬ್ರೂನಾ ಬಿಯಾಂಕಾರ್ಡಿ ಅವರು ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನೇಯ್ಮರ್ ಹಾಗೂ ಬ್ರೂನಾ ಬಿಯಾಂಕಾರ್ಡಿ ಪ್ರೀತಿಗೆ ಸಾಕ್ಷಿಯಾಗಿ ಪುತ್ರಿ ಜನಿಸಿದ್ದಳು. ಆಕೆಗೆ ಮಾವೀ ಎಂದು ಹೆಸರಿಡಲಾಗಿತ್ತು. ಮಗು ಜನಿಸಿದ ಖುಷಿಯ ಬೆನ್ನಲ್ಲೇ ನೇಯ್ಮರ್ ಅವರು ಬ್ರೂನಾ ಬಿಯಾಂಕಾರ್ಡಿ ಜತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನೇಯ್ಮರ್ ಜತೆಗಿನ ಬ್ರೇಕಪ್ ಕುರಿತು ಬ್ರೂನಾ ಬಿಯಾಂಕಾರ್ಡಿ ಮಾಹಿತಿ ನೀಡಿದ್ದಾರೆ. “ಇದು ನಮ್ಮ ಖಾಸಗಿ ವಿಷಯ. ಆದರೂ, ನನ್ನ ಹಾಗೂ ನೇಯ್ಮರ್ ಜತೆಗಿನ ಸಂಬಂಧದ ಕುರಿತು ಟ್ರೋಲ್‌ಗಳು, ಜೋಕ್‌ಗಳು ಹರಿದಾಡುತ್ತಿವೆ. ಇದು ಔಚಿತ್ಯ ಎಂದು ನನಗೆ ಅನಿಸಿಲ್ಲ. ನಾನು ಹಾಗೂ ನೇಯ್ಮರ್ ಪ್ರೀತಿಗಾಗಿ ಮಾವೀ ಜನಿಸಿದ್ದಾಳೆ. ನಾವಿಬ್ಬರೂ ಆಕೆಯ ಪೋಷಕರು. ಆದರೀಗ ನಾನು ಯಾರ ಜತೆಗೂ ಸಂಬಂಧ, ಪ್ರೀತಿ ಹೊಂದಿಲ್ಲ. ದಯಮಾಡಿ ಯಾವುದೇ ವದಂತಿಗಳೊಂದಿಗೆ ನನ್ನನ್ನು ತಳಕು ಹಾಕಬೇಡಿ” ಎಂದು ಮನವಿ ಮಾಡಿದ್ದರು.
ಇದನ್ನೂ ಓದಿ Neymar: ಫುಟ್ಬಾಲ್ ಆಟಗಾರ ನೇಯ್ಮರ್ ಗೆಳತಿ, ಮಗುವನ್ನು ಅಪಹರಿಸಲು ಯತ್ನ
ಬ್ರೇಕಪ್‌ಗೆ ಕಾರಣ ಏನು?
ಬ್ರೆಜಿಲ್‌ನ ಗೋಲ್ಡನ್ ಬಾಯ್ ಎಂದೇ ಖ್ಯಾತಿಯಾಗಿರುವ ನೇಯ್ಮರ್ ಅವರ ಸಂಬಂಧಗಳ ಕುರಿತು ಇತ್ತೀಚೆಗೆ ಭಾರಿ ಚರ್ಚೆಗಳು ನಡೆದಿದ್ದವು. ಇತ್ತೀಚೆಗಷ್ಟೇ ಒಬ್ಬ ಮಾಡೆಲ್‌ಗೆ ತನ್ನ ಖಾಸಗಿ ಫೋಟೊಗಳನ್ನು ಕಳುಹಿಸು ಎಂಬುದಾಗಿ ನೇಮರ್ ಚಾಟ್ ಮಾಡಿದ್ದ ಸ್ಕ್ರೀನ್‌ಶಾಟ್‌ಗಳು ಭಾರಿ ವೈರಲ್ ಆಗಿದ್ದವು. ಅಲ್ಲದೆ, ಇಬ್ಬರು ಮಹಿಳೆಯರ ಜತೆ ನೇಯ್ಮರ್ ಇರುವ ಫೋಟೊಗಳು ಕೂಡ ಕೆಲ ತಿಂಗಳ ಹಿಂದೆ ಹರಿದಾಡಿದ್ದವು. ನೇಯ್ಮರ್ ಹಲವು ಮಾಡೆಲ್‌ಗಳ ಜತೆ ಸಂಬಂಧ ಹೊಂದಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಇದೇ ಕಾರಣಕ್ಕೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.