ಮುಂಬಯಿ: ಬ್ರಜಿಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ನೇಯ್ಮರ್(Neymar) ಭಾರತದಲ್ಲಿ ತಮ್ಮ ಕಾಲ್ಚಳಕ ತೋರಲು ಸಿದ್ಧರಾಗಿದ್ದಾರೆ. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನ ಮುಂಬೈ ಸಿಟಿ(Mumbai City FC) ಫುಟ್ಬಾಲ್ ಕ್ಲಬ್ ಎಎಪ್ಸಿ ಚಾಂಪಿಯನ್ಸ್ ಲೀಗ್ನ(AFC Champions League) ಇತ್ತೀಚಿನ ಡ್ರಾದಲ್ಲಿ ಅಲ್-ಹಿಲಾಲ್(Al Hilal) ತಂಡವಿರುವ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಹೀಗಾಗಿ ನೇಯ್ಮರ್ ಅವರು ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ಭಾರತದಲ್ಲಿ ಅಧಿಕೃತ ಪಂದ್ಯ ಆಡಲಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ ಸಿಟಿ FC ತನ್ನ ತವರಿನ ಪಂದ್ಯಗಳನ್ನು ಪುಣೆಯ ಬಾಲೆವಾಡಿ ಕ್ರೀಡಾಂಗಣದಲ್ಲಿ ಆಡಲಿದೆ. ಒಂದೊಮ್ಮೆ ನೇಮರ್ ಕೂಡ ಭಾರತಕ್ಕೆ ಬಂದರೆ ಇದೇ ಮೈದಾನದಲ್ಲಿ ಪಂದ್ಯವನ್ನಾಡಲಿದ್ದಾರೆ. ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ಲಬ್ ಆಗಿರುವ ಅಲ್-ಹಿಲಾಲ್, ನೇಯ್ಮರ್, ರುಬೆನ್ ನೆವೆಸ್, ಕಾಲಿಡೌ ಕೌಲಿಬಾಲಿ, ಸೆರ್ಗೆಜ್ ಮಿಲಿಂಕೋವಿಕ್-ಸಾವಿಕ್ ಮುಂತಾದ ಸ್ಟಾರ್ ಆಟಗಾರರನ್ನು ಒಳಗೊಂಡಿದೆ. ‘ಡಿ’ ಗುಂಪಿನಲ್ಲಿರುವ ತಂಡಗಳೆಂದರೆ ಇರಾನ್ನ ಎಫ್ಸಿ ನಸ್ಸಾಜಿ ಮಝಾಂದರನ್ ಮತ್ತು ಉಜ್ಬೇಕಿಸ್ತಾನದ ಪಿಎಫ್ಸಿ ನವಬಹೋರ್ ನಮಂಗನ್. ಭಾರತ ಮುಂಬೈ ಎಫ್ಸಿ ಮತ್ತು ಅಲ್-ಹಿಲಾಲ್ ಕ್ಲಬ್. ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಅಲ್ ಸಾಸರ್ ತಂಡ ‘ಇ’ ಗುಂಪಿನಲ್ಲಿ ಕಾಣಿಸಿಕೊಂಡಿದೆ.
ಸೇಂಟ್-ಜರ್ಮೈನ್ ತೊರೆದ ನೇಯ್ಮರ್
ಕೆಲ ದಿನಗಳ ಹಿಂದಷ್ಟೇ ನೇಯ್ಮರ್ ಫ್ರಾನ್ಸ್ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್(Paris Saint-Germain Football Club) ತೊರೆದು ಸೌದಿ ಅರೇಬಿಯಾದ ಅಲ್-ಹಿಲಾಲ್ ಫುಟ್ಬಾಲ್ ಕ್ಲಬ್‌ಗೆ(Al Hilal Saudi Club) ಸೇರ್ಪಡೆಗೊಂಡಿದ್ದರು. 100 ಮಿಲಿಯನ್ ಯುರೋ (ಸುಮಾರು 1455ಕೋಟಿ ರೂ.) ಮೊತ್ತಕ್ಕೆ ಎರಡು ವರ್ಷಗಳ ಕಾಲ ನೇಯ್ಮರ್ ಈ ಕ್ಲಬ್ ಆಡಲು ಒಪ್ಪಂದ ಮಾಡಿಕೊಂಡಿದ್ದರು. 2017 ರಲ್ಲಿ ಸ್ಪೇನ್ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಯ್ಮರ್ ಅವರನ್ನು ಟ್ರಾನ್ಸ್ಫರ್ ಆಯ್ಕೆಯ ಮೂಲಕ ಪಿಎಸ್ಜಿ ತಂಡ ಖರೀದಿಸಿತ್ತು. 6 ವರ್ಷಗಳ ಕಾಲ ಪಿಎಸ್ಜಿ ತಂಡದ ಪರ ಆಡಿದ್ದ ನೇಯ್ಮರ್, 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ಬಾರ್ಸಿಲೋನಾ(FC Barcelona) ಪರ 186 ಪಂದ್ಯಗಳಲ್ಲಿ 105 ಗೋಲುಗಳಿಸಿದ್ದರು. ಇದೀಗ ಸೌದಿ ಅರೇಬಿಯಾ ಕ್ಲಬ್ ಪರ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ Neymar: ಸೌದಿ ಅರೇಬಿಯಾದ ಪ್ರಸಿದ್ಧ ಕ್ಲಬ್ ಪರ ಆಡಲಿದ್ದಾರೆ ನೇಮರ್
ತಂಡಕ್ಕೆ ಮರಳಿದ ನೇಯ್ಮರ್
ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಅಮೆರಿಕದ ವಿಶ್ವಕಪ್‌ನ (World Cup) ಆರಂಭಿಕ ಎರಡು ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ನೇಯ್ಮರ್ ಕೂಡ ಆಡಲಿದ್ದಾರೆ. ತಂಡದ ನೂತನ ಕೋಚ್ ಫರ್ನಾಂಡೋ ಡಿನಿಜ್ ಅವರ ಸೂಚನೆ ಮೇರೆಗೆ ನೇಮರ್ ತಂಡಕ್ಕೆ ಮರಳಲಿದ್ದಾರೆ. ಕಳೆದ ವಿಶ್ವಕಪ್ ನಂತರ ಮೊದಲ ಬಾರಿಗೆ ಬ್ರೆಜಿಲ್ ಪರ ಆಡಲಿದ್ದಾರೆ. ಬ್ರೆಜಿಲ್ ಸೆಪ್ಟೆಂಬರ್ 8 ರಂದು ಅಮೆಜಾನ್ ಪ್ರದೇಶದ ಬೆಲೆಮ್‌ನಲ್ಲಿ ಬೊಲಿವಿಯಾ ತಂಡವನ್ನು ಎದುರಿಸಲಿದೆ. ಇದಾದ ನಂತರ ನಾಲ್ಕು ದಿನಗಳ ನಂತರ ಲಿಮಾದಲ್ಲಿ ಪೆರುವನ್ನು ಎದುರಿಸಲಿದೆ.