ನವ ದೆಹಲಿ : ಆಡಳಿತ ವಿಚಾರದಲ್ಲಿ ಗೊಂದಲ ಉಂಟು ಮಾಡಿದ ಕಾರಣ ನಿಷೇಧ ಶಿಕ್ಷೆಗೆ (AIFF BAN) ಒಳಗಾಗಿ ಬಳಿಕ ತೆರವು ಮಾಡಿಸಿಕೊಂಡ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಇದೀಗ ೧೪ ಲಕ್ಷ ರೂಪಾಯಿ ದಂಡವನ್ನೂ ಹಾಕಿಸಿಕೊಂಡಿದೆ. ಆದರೆ, ಈ ಬಾರಿ ದಂಡ ಬಿದ್ದಿರುವುದು ಆಡಳಿತಕ್ಕೆ ಸಂಬಂಧಿಸಿದ ವಿಚಾರಕ್ಕಲ್ಲ, ಪಂದ್ಯವೊಂದರ ಆಯೋಜನೆ ವೇಳೆ ಎಡವಟ್ಟು ಮಾಡಿಕೊಂಡಿರುವುದಕ್ಕೆ. ದಂಡ ಹಾಕಿರುವುದು ವಿಶ್ವ ಫುಟ್ಬಾಲ್ ಒಕ್ಕೂಟವಲ್ಲ, ಬದಲಾಗಿ ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್.
ಕಳೆದ ಜೂನ್‌ನಲ್ಲಿ ಕೋಲ್ಕೊತಾದಲ್ಲಿ ಏಷ್ಯಾ ಕಪ್‌ನ ಅರ್ಹತಾ ಸುತ್ತಿನ ಪಂದ್ಯ ನಡೆದಿತ್ತು. ಈ ವೇಳೆ ಆಯೋಜಕರಾಗಿದ್ದ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪ್ರೇಕ್ಷಕರು ನಿಷೇಧಿತ ಪ್ರದೇಶಕ್ಕೆ ಪ್ರವೇಶ ಪಡೆದಿದ್ದರು. ಇದು ಆಯೋಜನೆಯ ಲೋಪವಾಗಿರುವ ಕಾರಣ ೧೪ ಲಕ್ಷ ರೂಪಾಯಿ ದಂಡನ್ನು ವಿಧಿಸಲಾಗಿದೆ.
೧೪ ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದರೂ ಅಷ್ಟನ್ನೂ ಒಂದೇ ಬಾರಿಗೆ ಕಟ್ಟಬೇಕಾಗಿಲ್ಲ. ೩.೨೧ ಲಕ್ಷ ರೂಪಾಯಿ ಮಾತ್ರ ಸದ್ಯ ಪಾವತಿ ಮಾಡಬೇಕು. ಉಳಿದ ೧೦.೭೯ ಲಕ್ಷ ರೂಪಾಯಿ ದಂಡದ ರೂಪದಲ್ಲಿ ಚಾಲ್ತಿಯಲ್ಲಿ ಇರಲಿದ್ದು, ಒಂದು ವೇಳೆ ಇದೇ ತಪ್ಪು ಮುಂದಿನ ಎರಡು ವರ್ಷದಲ್ಲಿ ಪುನರಾವರ್ತನೆಯಾದರೆ ಆ ಹಣವನ್ನೂ ಪಾವತಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ದಂಡ ಮನ್ನವಾಗುತ್ತದೆ.
ಜೂನ್‌ನಲ್ಲಿ ಅರ್ಹತಾ ಸುತ್ತನ್ನ ನಡೆಸುವ ಹಕ್ಕನ್ನು ಭಾರತ ಪಡೆದುಕೊಂಡಿತ್ತು. ಅಫಘಾನಿಸ್ತಾನ ಹಾಗೂ ಹಾಂಕಾಂಗ್ ನಡುವೆ ಕೋಲ್ಕೊತಾದಲ್ಲಿ ಪಂದ್ಯ ನಡೆದಿತ್ತು. ಆಟಗಾರರು ಇರುವ ಜಾಗಕ್ಕೆ ಪ್ರೇಕ್ಷಕರು ನುಗ್ಗಿದ್ದರು. ಇದರಿಂದಿ ಆಟಗಾರರಿಗೆ ಅಪಾಯ ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಫುಟ್ಬಾಲ್ ಪಂದ್ಯ ನಡೆಯುವ ವೇಳೆ ಕೆಲವೊಂದು ಪ್ರದೇಶವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿತ ಪ್ರದೇಶ ಎಂದು ಹೇಳಲಾಗುತ್ತದೆ. ಒಂದು ವೇಳೆ ಲೋಪವಾದರೆ ಅಯೋಜಕರನ್ನು ದಂಡಕ್ಕೆ ಗುರಿಯಾಗಿಸಲಾಗುತ್ತದೆ.
ನಿಷೇಧದಿಂದ ಪಾರು
ಅಖಿಲ ಭಾರತ ಫುಟ್ಬಾಲ್ ಒಕ್ಕೂಟವು ಇತ್ತೀಚೆಗಷ್ಟೇ ನಿಷೇಧ ಶಿಕ್ಷೆಗೆ ಒಳಗಾಗಿತ್ತು. ಸುಪ್ರೀಮ್ ಕೋರ್ಟ್ ನೇಮಕ ಮಾಡಿದ ಆಡಳಿತಾತ್ಮಕ ಸಮಿತಿ, ಎಐಎಫ್‌ಎಫ್ ಆಡಳಿತದಲ್ಲಿ ಮೂಗು ತೂರಿಸುತ್ತಿದೆ ಎಂದು ಫಿಫಾ ನಿಷೇಧ ಶಿಕ್ಷೆ ಹೇರಿತ್ತು. ಕೇಂದ್ರ ಸರಕಾರದ ಮನವಿ ಮೇರೆಗೆ ಸುಪ್ರೀಮ್ ಕೋರ್ಟ್ ಆಡಳಿತಾತ್ಮಕ ಸಮಿತಿಯನ್ನು ವಿಸರ್ಜಿಸಿದ ಬಳಿಕ ನಿಷೇಧದಿಂದ ಪಾರಾಗಿತ್ತು.
ಇದನ್ನೂ ಓದಿ | ವಿಸ್ತಾರ Explainer | FIFA ban: ಪ್ರಫುಲ್ ಪಟೇಲ್ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್