Site icon Vistara News

Los Angeles Olympics 2028 : ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿದ್ದಕ್ಕೆ ನೀತಾ ಅಂಬಾನಿ ಸಂತಸ

Neeta ambani 2

ಮುಂಬೈ: ಅಮೆರಿಕಾದ ಲಾಸ್ ಏಂಜಲಿಸ್ ನಲ್ಲಿ 2028ರಲ್ಲಿ (Los Angeles Olympics 2028) ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸ್ಪರ್ಧೆಯನ್ನು ಸೇರಿಸಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ನಿರ್ಧಾರವು ವಿಶ್ವದಲ್ಲಿ ಒಲಿಂಪಿಕ್ ಕೂಟದ ಬಗ್ಗೆ ಹೊಸ ಆಸಕ್ತಿ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ (ಐಒಸಿ.) ಸದಸ್ಯೆ ನೀತಾ ಅಂಬಾನಿ ಹೇಳಿದ್ದಾರೆ. ಯಾಕೆಂದರೆ ಕ್ರಿಕೆಟ್​ ಸೇರ್ಪಡೆಯ ಹಿಂದೆ ಐಪಿಎಲ್​ನ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅವರ ಶ್ರಮವೇ ನಿರ್ಣಾಯಕವಾಗಿತ್ತು.

ಮುಂಬೈನಲ್ಲಿ ನಡೆಯುತ್ತಿರುವ 141 ನೇ ಐಒಸಿ ಅಧಿವೇಶನದಲ್ಲಿ ಟಿ20 ಕ್ರಿಕೆಟ್ ಆಟವನ್ನು ಅಧಿಕೃತವಾಗಿ ಒಲಿಂಪಿಕ್ ಕ್ರೀಡೆಯಾಗಿ ಸೇರ್ಪಡೆಗೊಳಿಸಿರುವ ಕುರಿತು ಮಾತನಾಡಿದ ನೀತಾ ಅಂಬಾನಿ, ಐಒಸಿ ಸದಸ್ಯೆಯಾಗಿ ಹೆಮ್ಮೆಯ ಭಾರತೀಯಳಾಗಿ ಮತ್ತು ಕ್ರಿಕೆಟ್ ಅಭಿಮಾನಿಯಾಗಿ, 2028ರ ಬೇಸಿಗೆ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಪರವಾಗಿ ಐಒಸಿ ಸದಸ್ಯರು ಮತ ಚಲಾಯಿಸಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದರು.

ಕ್ರಿಕೆಟ್ ಜಾಗತಿಕವಾಗಿ ಅತ್ಯಂತ ಪ್ರೀತಿಪಾತ್ರ ಕ್ರೀಡೆಗಳಲ್ಲಿ ಒಂದಾಗಿದೆ ಮತ್ತು ಎರಡನೇ ಅತಿ ಹೆಚ್ಚು ವೀಕ್ಷಿಸಲಾಗುವ ಕ್ರೀಡೆಯಾಗಿದೆ. 1.4 ಶತಕೋಟಿ ಭಾರತೀಯರಿಗೆ ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಧರ್ಮ ಎಂದು ನೀತಾ ಅಂಬಾನಿ ಹೇಳಿದ್ದಾರೆ. 1900ರ ಒಲಿಂಪಿಕ್ಸ್‌ನಲ್ಲಿ ಎರಡು ತಂಡಗಳು ಮಾತ್ರ ಭಾಗವಹಿಸಿದ್ದ ಕ್ರಿಕೆಟ್ ಸ್ಪರ್ಧೆ ಆಡಲಾಗಿತ್ತು.

40 ವರ್ಷಗಳ ಬಳಿಕ ಅಧೀವೇಶನ

ಭಾರತದಲ್ಲಿ ಐಒಸಿ ಅಧಿವೇಶನ ನಡೆಯುತ್ತಿರುವುದು ಇತಿಹಾಸದಲ್ಲಿ ಇದು ಎರಡನೇ ಬಾರಿಯಾಗಿದ್ದು 40 ವರ್ಷಗಳ ನಂತರ ದೇಶಕ್ಕೆ ಮರಳಿದೆ. ಈ ಅಧೀವೇಶನದಲ್ಲಿ ಕ್ರಿಕೆಟ್ ಆಟವನ್ನು ಒಲಿಂಪಿಕ್ಸ್‌ಗೆ ಸೇರಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಮ್ಮ ದೇಶದಲ್ಲಿ, ಮುಂಬೈನಲ್ಲಿ ನಡೆಯುತ್ತಿರುವ 141 ನೇ ಐಒಸಿ ಅಧಿವೇಶನದಲ್ಲಿ ಈ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.

“ಈ ಐತಿಹಾಸಿಕ ನಿರ್ಧಾರಕ್ಕಾಗಿ ನಾನು ಐಒಸಿ. ಮತ್ತು ಲಾಸ್ ಏಂಜಲೀಸ್ ಸಂಘಟನಾ ಸಮಿತಿಗೆ ಧನ್ಯವಾದ ಮತ್ತು ಅಭಿನಂದಿಸುತ್ತೇನೆ. ಇದು ನಿಜವಾಗಿಯೂ ಬಹಳ ಸಂತೋಷ ಮತ್ತು ಸಂತೋಷದ ದಿನವಾಗಿದೆ’ ಎಂದು ನೀತಾ ಅಂಬಾನಿ ಹೇಳಿದ್ದಾರೆ.

ಇದನ್ನೂ ಓದಿ : IOC Sessions : 40 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಐಒಸಿ ಅಧಿವೇಶನ

ನಾಲ್ಕು ಕ್ರೀಡೆಗಳ ಸೇರ್ಪಡೆ

ವಿಶ್ವದ ಅತಿದೊಡ್ಡ ಮತ್ತು ಶ್ರೇಷ್ಠ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ 1900ರ ಬಳಿಕ ಕ್ರಿಕೆಟ್‌ ಸ್ಪರ್ಧೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ(Los Angeles 2028 Olympics) ಕ್ರಿಕೆಟ್‌(2028 Olympics Cricket) ಪಂದ್ಯವನ್ನು ಪದಕ ಸ್ಪರ್ಧೆಯಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಜತೆಗೆ ಫ್ಲ್ಯಾಗ್‌ ಫುಟ್‌ಬಾಲ್‌, ಬೇಸ್‌ಬಾಲ್‌, ಸಾಫ್ಟ್ ಬಾಲ್‌ ಕ್ರೀಡೆಗಳೂ ಇರಲಿವೆ.

ಸೋಮವಾರ ಮುಂಬಯಿಯಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಅಧಿಕೃತಗೊಳಿಸಲಾಯಿತು. ಅಕ್ಟೋಬರ್​ 10ರಂದೇ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆಗೊಳ್ಳಲಿದೆ ಎನ್ನುವುದು ತಿಳಿದುಬಂದಿತ್ತು. ಆದರೆ ಇದು ಅಧಿಕೃತವಾಗಿರಲಿಲ್ಲ. ಈಗ ಇದು ಅಧಿಕೃತಗೊಂಡಿದೆ. ಕ್ರಿಕೆಟ್​ ಸೇರಿ ಒಟ್ಟು 5 ಕ್ರೀಡೆಗಳನ್ನು ಸೇರಿಸಲಾಗಿದೆ. ಸಾಫ್ಟ್‌ಬಾಲ್, ಲ್ಯಾಕ್ರೋಸ್, ಫ್ಲ್ಯಾಗ್‌ ಫುಟ್‌ಬಾಲ್‌, ಬೇಸ್‌ಬಾಲ್‌, ಸ್ಕ್ವಾಷ್​ ಇರಲಿದೆ.

ಇದೇ ವರ್ಷದ ಆರಂಭದಲ್ಲಿ ಅಂ​ತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಲಾಸ್‌ ಏಂಜಲೀಸ್​ ಒಲಿಂಪಿಕ್ಸ್​ನಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳ ಟಿ20 ಕೂಟದ ಕ್ರಿಕೆಟ್​ ನಡೆಸುವಂತೆ ವೇಳಾಪಟ್ಟಿಯನ್ನು ರಚಿಸಿ ಗೇಮ್ಸ್‌ನ ಸಂಘಟನ(IOC) ಸಮಿತಿಗೆ ಶಿಫಾರಸು ಮಾಡಿತ್ತು. ಇದೀಗ ಒಲಿಂಪಿಕ್ಸ್​ ಸಮಿತಿಯಿಂದ ಕ್ರಿಕೆಟ್​ ಸೇರ್ಪಡೆಯಾಗಿದೆ. ಆದರೆ ಯಾವ ತಂಡ ಮತ್ತು ಯಾವ ಆಧಾರದಲ್ಲಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎನ್ನುವುದು ಸದ್ಯದ ಕುತೂಹಲ.

ಒಂದು ಬಾರಿ ನಡೆದಿತ್ತು ಕ್ರಿಕೆಟ್​

ಒಲಿಂಪಿಕ್ಸ್‌ನಲ್ಲಿ ಇಷ್ಟರವರೆಗೆ ಒಮ್ಮೆ ಮಾತ್ರ ಕ್ರಿಕೆಟ್‌ ಸ್ಪರ್ಧೆ ನಡೆದಿದೆ. 1896ರ ಉದ್ಘಾಟನ ಏಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆಯನ್ನು ಸೇರ್ಪಡೆಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಾಗವಹಿಸುವ ತಂಡಗಳ ಕೊರತೆಯಿಂದ ರದ್ದು ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ 1900ರ ಪ್ಯಾರಿಸ್‌ ಒಲಿಪಿಕ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ಮೊದಲ ಬಾರಿ ಜರಗಿದೆ. ಗ್ರೇಟ್‌ ಬ್ರಿಟನ್‌ ಮತ್ತು ಆತಿಥೇಯ ಫ್ರಾನ್ಸ್‌ ಮಾತ್ರ ಸ್ಪರ್ಧಿಸಿದ್ದು, ಬ್ರಿಟನ್‌ ಚಿನ್ನ ಜಯಿಸಿತ್ತು.ಸೈಂಟ್‌ ಲೂಯಿಸ್‌ನಲ್ಲಿ 1904ರಲ್ಲಿ ನಡೆದ ಒಲಿಂಪಿಕ್ಸನಲ್ಲಿ ಕ್ರಿಕೆಟ್‌ ಸ್ಪರ್ಧೆಗೆ ಸಿದ್ಧಥೆ ನಡೆಸಲಾಗಿದ್ದರೂ ಅಂತಿಮವಾಗಿ ರದ್ದುಗೊಂಡಿತ್ತು. ಆ ಬಳಿಕ ಯಾವುದೇ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್‌ ಸ್ಪರ್ಧೆ ನಡೆದಿಲ್ಲ.

Exit mobile version