ಲಂಡನ್: ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ನಿತಿನ್ ಮೆನನ್(Nitin Menon) ಟೀಮ್ ಇಂಡಿಯಾ(Team India) ಆಟಗಾರರ ಬಗ್ಗೆ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಕಳೆದ 3 ವರ್ಷಗಳಿಂದ ಭಾರತದ ಸೂಪರ್‌ಸ್ಟಾರ್ ಕ್ರಿಕೆಟಿಗರ ನಿರಂತರ ಒತ್ತಡವನ್ನು ಎದುರಿಸಿ ನಿಂತಿದ್ದರಿಂದ ತನಗೆ ಐಸಿಸಿ(ICC) ಎಲೈಟ್ ಪ್ಯಾನಲ್‌ನಲ್ಲಿ ಸ್ಥಾನ ಸಿಕ್ಕಿತು ಎಂಬುದಾಗಿ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಸದ್ಯ ಅವರು ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2020ರಲ್ಲಿ ಐಸಿಸಿ ಎಲೈಟ್ ಪ್ಯಾನಲ್‌ಗೆ ಸೇರ್ಪಡೆಗೊಂಡ ನಿತಿನ್ ಮೆನನ್, ಕೋವಿಡ್-19 ಕಾರಣದಿಂದಾಗಿ ತವರಿನಲ್ಲೇ ಕರ್ತವ್ಯ ನಿಭಾಯಿಸುತ್ತ ಬಂದಿದ್ದರು. ಟಿ20 ವಿಶ್ವಕಪ್ ವೇಳೆ ಆಸ್ಟ್ರೇಲಿಯ-ಯುಎಇ ಪಂದ್ಯದಲ್ಲಿ, ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಏರ್ಪಟ್ಟ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮೆನನ್ ಅಂಪೈರ್ ಆಗಿದ್ದರು. ಈವರೆಗೆ 15 ಟೆಸ್ಟ್, 24 ಏಕದಿನ ಹಾಗೂ 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ.
ಕೊಹ್ಲಿ ವಿಚಾರದಲ್ಲಿ ಮೆನನ್ ತೆಗೆದುಕೊಂಡ ಹಲವು ನಿರ್ಧಾರಗಳು ವಿವಾದಕ್ಕೆ ಕಾರಣವಾಗಿತ್ತು. ಇದೇ ವಿಚಾರದಲ್ಲಿ ಕೊಹ್ಲಿ ಮತ್ತು ನಿತಿನ್ ಮೆನನ್ ಮೈದಾನದಲ್ಲೇ ಹಲವು ಬಾರಿ ಕಚ್ಚಾಟವನ್ನೂ ನಡೆಸಿದ್ದರು. ಸದ್ಯ ಅವರು ಭಾರತೀಯ ಆಟಗಾರರ ಬಗ್ಗೆ ವಿಶ್ವ ಮಟ್ಟದಲ್ಲಿ ಈ ಹೇಳಿಕೆ ನೀಡಿರುವುದು ಭಾರತೀಯ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದೆ.ಭಾರತ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ಟೂರ್ನಿಯಲ್ಲಿಯೂ ನಿತಿನ್ ಮೆನನ್ಗೆ ಅವಕಾಶ ಸಿಗುವ ಸಾಧ್ಯತೆ ಅಧಿಕವಾಗಿದೆ.
ಇದನ್ನೂ ಓದಿ ICC World Cup 2023: ವಿಶ್ವ ಕಪ್ ಅರ್ಹತಾ ಪಂದ್ಯಗಳಿಗೆ ವೇದಿಕೆ ಸಜ್ಜು; 2 ಸ್ಥಾನಕ್ಕೆ 10 ತಂಡಗಳ ಪೈಪೋಟಿ
ಅಂಪೈರ್ ಕಾಲೆಳೆದಿದ್ದ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧ ಇದೇ ಮಾರ್ಚ್ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ನಿತಿನ್ ಮೆನನ್ ಅವರ ತೀರ್ಪಿಗೆ ವಿರಾಟ್ ಕೊಹ್ಲಿ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಒಂದೊಮ್ಮೆ ನಾನು ಬ್ಯಾಟಿಂಗ್ ಮಾಡುತ್ತಿದ್ದರೆ ನೀವು ಔಟ್ ನೀಡುತ್ತಿದ್ದೀರಿ ಎಂದು ಹೇಳುವ ಮೂಲಕ ಅವರ ತಪ್ಪು ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೊಹ್ಲಿಯ ಈ ಮಾತುಗಳು ಸ್ಟಂಪ್ ಮೈಕ್ನಲ್ಲಿ ಸ್ಪಷ್ಟವಾಗಿ ರೆಕಾರ್ಡ್ ಆಗಿತ್ತು. ಜತೆಗೆ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.