ನವ ದೆಹಲಿ: ಐಪಿಎಲ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಅವರ ಪತ್ನಿ ಸಾಚಿ ಮಾರ್ವಾ ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರನ್ನು ಪಶ್ಚಿಮ ದೆಹಲಿಯಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 4ರಂದು ರಾತ್ರಿ ಘಟನೆ ನಡೆದಿದ್ದು, ಸಾಚಿ ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದರು. ಬಳಿಕ ಕೀರ್ತಿನಗರ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ದೂರು ಸಲ್ಲಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
18 ವರ್ಷದವರಾದ ಚೈತನ್ಯ ಶಿವಂ ಹಾಗೂ ವಿವೇಕ್ ಬಂಧಿತ ಆರೋಪಿಗಳು. ಅವರ ಮನೆಗಳಿಂದ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಚಿ ಅವರು ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಛತ್ತರ್ಪುರದಿಂದ ಮನೆಗೆ ಮರಳುತ್ತಿದ್ದ ವೇಳೆ ಆರೋಪಿಗಳು ಬೈಕ್ನಲ್ಲಿ ಬಂದು ಅವರ ಕಾರನ್ನು ಅಡ್ಡಗಟ್ಟಿ ಕೈ ಹಿಡಿದು ಎಳೆದಿದ್ದರು.
ಕೀರ್ತಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 354 ಡಿ (ಹಿಂಬಾಲಿಸುವುದು), 427 ( ಕಿಡಿಗೇಡಿತನ) ಮತ್ತು 506 (ಕ್ರಿಮಿನಲ್ ಬೆದರಿಕೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ಡೆಲ್ಲಿಯ ಡಿಸಿಪಿ ಘನಶ್ಯಾಮ್ ಬನ್ಸಾಲ್ ತಿಳಿಸಿದ್ದಾರೆ.
ಏನಿದು ಘಟನೆ?
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ನಿತೀಶ್ ರಾಣಾ ಅವರ ಪತ್ನಿ ಸಾಚಿ ಮರ್ವಾ(Saachi Marwah) ಅವರ ಕಾರನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಹಿಂಬಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಚಾರವನ್ನು ಸಾಚಿ ಮರ್ವಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ರಾಣಾ ಪತ್ನಿ ಸಾಚಿ ಮರ್ವಾ ಅವರು ಕಾರಿನಲ್ಲಿ ಮನೆಗೆ ಬರುವ ಮಾರ್ಗದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕೆಲ ದೂರ ಹಿಂಬಾಲಿಸಿಕೊಂಡು ಬಂದ ಈ ಅಪರಿಚಿತ ವ್ಯಕ್ತಿಗಳು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ತಮ್ಮ ಕಾರನ್ನು ಹಿಂಬಾಲಿಕೊಂಡು ಬಂದ ಇಬ್ಬರು ವ್ಯಕ್ತಿಗಳ ಫೋಟೊವನ್ನು ಮರ್ವಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಹಾಕಿಕೊಂಡಿದ್ದರು.
ಘಟನೆಯ ಬಗ್ಗೆಯೂ ಮಾಹಿತಿ ನೀಡಿರುವ ಮರ್ವಾ ಅವರು, “ಈ ಘಟನೆ ನಡೆದ ತಕ್ಷಣ ತಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಆದರೆ ಪೊಲೀಸರು ನನಗೆ ಯಾವುದೇ ಸಹಾಯ ಮಾಡಲಿಲ್ಲ. ನೀವು ಈಗಾಗಲೇ ಮನೆಗೆ ಸುರಕ್ಷಿತವಾಗಿ ತಲುಪಿದ್ದೀರಾ ಎಂದು ಕೇಳಿ, ಮುಂದಿನ ಸಲ ಈ ರೀತಿಯ ಘಟನೆ ಸಂಭವಿಸಿದರೆ ವಾಹನದ ನಂಬರ್ ನೋಟ್ ಮಾಡಿಕೊಳ್ಳಿ” ಎಂಬುದಾಗಿ ಸಲಹೆ ನೀಡಿದ್ದರು ಎಂದು ಹೇಳಿದ್ದರು.
ಸಾಚಿ ಮರ್ವಾ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ಫೋಸ್ಟ್ ಮಾಡುತ್ತಿದ್ದಂತೆ ಹಲವು ನೆಟ್ಟಿಗರು ಟ್ವಿಟರ್ನಲ್ಲಿ ದೆಹಲಿ ಪೊಲೀಸರ ಈ ಉದಾಸಿನದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ರಕ್ಷಣೆಗೆ ಬಾರದ ಈ ಪೊಲೀಸ್ ಅಧಿಕಾತರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.