ನವ ದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ರವಾಸಿ ತಂಡದ ಅರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಅವರು ಅವಕಾಶ ಪಡೆಯಲಿದ್ದಾರೆ. ಡೇವಿಡ್ ವಾರ್ನರ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಅದೇ ರೀತಿ ಎರಡನೇ ಪಂದ್ಯಕ್ಕೆ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕೆ ಇಳಿಯುವುದು ಪ್ರವಾಸಿ ಬಳಗದ ಯೋಜನೆಯಾಗಿದೆ. ಹೀಗಾಗಿ ಎಡಗೈ ಸ್ಪಿನ್ನರ್ ಮ್ಯಾಟ್ ಕುಹ್ನೆಮನ್ ತಂಡ ಸೇರಿಕೊಳ್ಳುವ ಸಾಧ್ಯತೆಗಳಿವೆ.
ಡೇವಿಡ್ ವಾರ್ನರ್ ಮೊದಲ ಪಂದ್ಯದಲ್ಲಿ ರನ್ ಬರ ಎದುರಿಸಿದ್ದರು. ಮೊದಲ ಇನಿಂಗ್ಸ್ನಲ್ಲಿ ಒಂದು ರನ್ ಬಾರಿಸಿದ್ದರೆ ಎರಡನೇ ಇನಿಂಗ್ಸ್ನಲ್ಲಿ 10 ರನ್ಗೆ ಸೀಮಿತಗೊಂಡಿದ್ದರು. ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಅವರು ಬೇಗ ವಿಕೆಟ್ ಒಪ್ಪಿಸಿರುವ ಕಾರಣ ಆ ತಂಡಕ್ಕೆ ಹಿನ್ನಡೆ ಉಂಟಾಗಿತ್ತು. ಅದೇ ರೀತಿ ಭಾರತದಲ್ಲಿ ಸ್ಪಿನ್ಗೆ ಪೂರಕವಾಗಿರುವ ಪಿಚ್ ಇರುತ್ತದೆ ಎಂಬ ಕಾರಣಕ್ಕೆ ವಾರ್ನರ್ ಬದಲಿಗೆ ಸ್ಪಿನ್ ಆಲ್ರೌಂಡರ್ ಒಬ್ಬರನ್ನು ತಂಡಕ್ಕೆ ಸೇರಿಸುವುದು ಕ್ರಿಕೆಟ್ ಆಸ್ಟ್ರೇಲಿಯಾದ ಗುರಿಯಾಗಿದೆ.
ಇದನ್ನೂ ಓದಿ : R Ashwin : ರವೀಂದ್ರ ಜಡೇಜಾನಂಥ ಜತೆಗಾರ ಸಿಕ್ಕಿದ್ದಕ್ಕೆ ಧನ್ಯ ಎಂದ ಅಶ್ವಿನ್; ಅವರು ಈ ಮಾತು ಹೇಳಿದ್ದು ಯಾಕೆ?
ವಾರ್ನರ್ ಸ್ಥಾನಕ್ಕೆ ಪರ್ಯಾಯ ಆಟಗಾರನನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದ್ದರೂ, ಅವರನ್ನೇ ಉಳಿಸಿಕೊಳ್ಳಬೇಕೆನ್ನುವ ಅಭಿಪ್ರಾಯವೂ ಅಲ್ಲಿ ಕೇಳಿ ಬರುತ್ತಿದೆ. ಮಾಜಿ ಆಟಗಾರ ಮಾರ್ಕ್ ಟೇಲರ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಾರ್ನರ್ ಬ್ಯಾಟಿಂಗ್ನಲ್ಲಿ ಮಿಂಚಲಿದ್ದಾರೆ ಎಂದು ಹೇಳಿದ್ದಾರೆ.