ಮುಂಬಯಿ : ಎದ್ದು, ಬಿದ್ದು , ಮಲಗಿ ಸಿಕ್ಸರ್ ಹೊಡೆಯುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಮುಂದಿನ ಗುರಿ ನೋ ಲುಕ್ ಶಾಟ್ (No look Shot) ಹೊಡೆಯುವುದು. ಈ ಕಲೆ ಎಲ್ಲರಿಗೂ ಬರುವುದಿಲ್ಲ. ಆದರೆ, ಕೆಲವು ಆಟಗಾರರು ಇಂಥ ಹೊಡೆತದಲ್ಲಿ ನಿಸ್ಸೀಮರು. ಅವರಿಂದ ಈ ಹೊಡೆತವನ್ನು ಕಲಿಯುವುದಕ್ಕೆ ಮುಂದಾಗಿದ್ದಾರೆ ಸೂರ್ಯ. ಅವರಿಗೆ ಈ ಹೊಡೆತದ ಬಗ್ಗೆ ಪಾಠ ಮಾಡುವವರು ಯಾರು ಗೊತ್ತೇ? ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೀವಾಲ್ಡ್ ಬ್ರೇವಿಸ್.
ಡೀವಾಲ್ಡ್ ಬ್ರೇವಿಸ್ 19ರ ವಯೋಮಿತಿಯ ವಿಶ್ವ ಕಪ್ ವೇಳೆಯಲ್ಲೇ ನೋ ಲುಕ್ ಶಾಟ್ ಹೊಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಚೆಂಡನ್ನು ಮಾತ್ರ ನೋಡಿ ಬ್ಯಾಟಿನಿಂದ ಹೊಡೆದ ಬಳಿಕ ಚೆಂಡು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ನೋಡದಿರುವುದೇ ಈ ನೋ ಲುಕ್ ಶಾಟ್. ಸೂರ್ಯಕುಮಾರ್ ಅವರ ಬತ್ತಳಿಕೆಯಲ್ಲಿ ಈ ಅಸ್ತ್ರವಿಲ್ಲ. ಹೀಗಾಗಿ ಅವರು ಡೀವಾಲ್ಡ್ ಬ್ರೆವಿಸ್ ಅವರಿಂದ ಕಲಿಯಲು ಮುಂದಾಗಿದ್ದಾರೆ.
ಡೀವಾಲ್ಡ್ ಅವರು 2021ರ 19ರ ವಯೋಮಿತಿಯ ವಿಶ್ವ ಕಪ್ನಲ್ಲಿ ಸ್ಟಾರ್ ಆಟಗಾರನಾಗಿ ಮಿಂಚಿದ್ದರು. ಹೀಗಾಗಿ 3 ಕೋಟಿ ರೂಪಾಯಿ ಕೊಟ್ಟು ಅವರನ್ನು ತನ್ನ ತಂಡದ ತೆಕ್ಕೆಗೆ ತೆಗೆದುಕೊಂಡಿದೆ ಐಪಿಎಲ್ನ ಮುಂಬಯಿ ಇಂಡಿಯನ್ಸ್ ಫ್ರಾಂಚೈಸಿ. ಡೀವಾಲ್ಡ್ ಹಾಗೂ ಸೂರ್ಯಕುಮಾರ್ ಯಾದವ್ ಇಲ್ಲಿ ಒಂದೇ ತಂಡದ ಸದಸ್ಯರು. ಹೀಗಾಗಿ ಐಪಿಎಲ್ ವೇಳೆ ನೋ ಲುಕ್ ಶಾಟ್ ಕಲಿಯುವುದು ಸೂರ್ಯಕುಮಾರ್ ಯಾದವ್ ಅವರ ಯೋಜನೆಯಾಗಿದೆ.
ಇದನ್ನೂ ಓದಿ | Suryakumar Yadav | ಸೂರ್ಯಕುಮಾರ್ ಯಾದವ್ ಟಿ20 ಶತಕಗಳು