Site icon Vistara News

SA vs NED: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಹರಿಣಗಳ ಪಡೆ; ಡಚ್ಚರು ಎದುರಾಳಿ

Temba Bavuma and Co await the chase

ಧರ್ಮಶಾಲಾ: ಚೋಕರ್ಸ್​ ಹಣೆಪಟ್ಟಿಯನ್ನು ಕಳೆದುಕೊಳ್ಳವ ಶಪಥ ಮಾಡಿರುವ ದಕ್ಷಿಣ ಆಫ್ರಿಕಾ(SA vs NED) ತಂಡ ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಉತ್ಕೃಷ್ಟ ಮಟ್ಟದ ಆಟ ಪ್ರದರ್ಶಿಸುತ್ತಿದೆ. ಆಡಿದ ಎರಡು ಪಂದ್ಯಗಳಲ್ಲಿಯೂ ಮುನ್ನೂರರ ಗಡಿ ದಾಟಿ ಗೆಲುವು ಸಾಧಿಸಿದೆ. ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ಮಂಗಳವಾರ ನೆದರ್ಲೆಂಡ್ಸ್​ ವಿರುದ್ಧ ಆಡಲಿದೆ.

ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಅತ್ಯಂತ ಸಮರ್ಥವಾಗಿದೆ. ಬ್ಯಾಟಿಂಗ್​ನಲ್ಲಿ ಕ್ವಿಂಟನ್​ ಡಿ ಕಾಕ್​, ಹೆನ್ರಿಕ್‌ ಕ್ಲಾಸೆನ್‌, ಟೆಂಬ ಬವುಮಾ, ರಸ್ಸಿ ವಾನ್​ಡರ್​ ಡುಸ್ಸೆನ್​, ಐಡೆನ್​ ಮಾರ್ಕ್ರಮ್​, ಡೇವಿಡ್​ ಮಿಲ್ಲರ್​ ಇವರೆಲ್ಲ ಸಿಡಿದು ನಿಂತರೆ ದೊಡ್ಡ ಮೊತ್ತಕೇನು ಕೊರತೆಯಾಗದು. ಬೌಲಿಂಗ್​ ಕೂಡ ಘಾತವಾಗಿದೆ. ಕಗಿಸೊ ರಬಾಡ, ಲುಂಗಿ ಎನ್​ಗಿಡಿ, ಸ್ಪಿನ್​ನಲ್ಲಿ ಕೇಶವ್​ ಮಹಾರಾಜ್​, ತಬ್ರೇಜ್ ಮೋಡಿ ಮಾಡಬಲ್ಲರು. ಅದರಲ್ಲೂ ಡಿ ಕಾಕ್​ ಅವರು ಸತತ ಎರಡು ಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿಯೂ ಶತಕ ಬಾರಿಸುವ ಇರಾದೆಯಲ್ಲಿದ್ದಾರೆ. ಇಂತಹ ಘಟಾನುಘಟಿ ಆಟಗಾರನ್ನು ಹಿಡಿದು ನಿಲ್ಲಿಸಿ ನೆದರ್ಲೆಂಡ್ಸ್​ ಗೆದ್ದರೆ ಇವರ ಸಾಹಸವನ್ನು ಮೆಚ್ಚಲೇ ಬೇಕು. ಕ್ರಿಕೆಟ್​ನಲ್ಲಿ ಏನೂ ಸಂಭವಿಸಬಹುದು ಎನ್ನುವುದಕ್ಕೆ ಭಾನುವಾರದ ಆಫ್ಘಾನ್​ ಮತ್ತು ಇಂಗ್ಲೆಂಡ್​ ವಿರುದ್ಧದ ಪಂದ್ಯವೇ ಸಾಕ್ಷಿ.

ನೆದರ್ಲೆಂಡ್ಸ್​ ತಂಡ ಸೋಲು ಕಂಡಿದ್ದರೂ ಕಳಪೆ ಪ್ರದರ್ಶನವನ್ನು ಮಾತ್ರ ತೋರಿಲ್ಲ. ಬಲಿಷ್ಠ ತಂಡಕ್ಕೂ ಒಂದು ಹಂತದಲ್ಲಿ ಸೋಲಿನ ಭಯ ಹುಟ್ಟಿಸಿತ್ತು. ನಿಂತು ಆಡುವ 2 ಆಟಗಾರರು ಈ ತಂಡದಲ್ಲಿದ್ದರೆ ಗೆಲುವು ಖಚಿತ. ಎಲ್ಲ ಆಟಗಾರರು ಬಿರುಸಿನ ಬ್ಯಾಟಿಂಗ್​ಗೆ ಹೆಚ್ಚು ಒತ್ತು ನೀಡುವ ಕಾರಣ ಒಂದು ಹಂತದಲ್ಲಿ ರನ್​ ಹೊಳೆಯೇ ಹರಿದು ಬಂದರೂ ಆ ಬಳಿಕ ನಾಟಕೀಯ ಕುಸಿತ ಕಾಣುತ್ತಿದೆ. ಬಾಸ್​ ಡಿ ಲೀಡೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ತಂಡಕ್ಕೆ ನೆರವಾಗಬಲ್ಲರು.

ಪಿಚ್​ ರಿಪೋರ್ಟ್​

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡಕ್ಕೂ ಸಮಾನವಾದ ಅವಾಶ ಕಲ್ಪಿಸುತ್ತದೆ. ರಾತ್ರಿಯ ವೇಳೆ ಇಲ್ಲಿ ಇಬ್ಬನಿ ಸಮಸ್ಯೆ ಇರುವುದರಿಂದ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚು ಸಹಾಯಕಾರಿ. ಬೌಲರ್​ಗೆ ನಿರ್ದಿಷ್ಟ ಗುರಿಯೆಡೆಗೆ ಬೌಲಿಂಗ್​ ನಡೆಸಲು ಹಿಡಿತ ಸಾಧಿಸುವುದಿಲ್ಲ. ಇಬ್ಬನಿಯಿಂದ ಚೆಂಡು ಕೈಯಿಂದ ಜಾರುತ್ತದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ ಒಲಿಂಪಿಕ್ಸ್‌ಗೂ ಕ್ರಿಕೆಟ್ ಎಂಟ್ರಿ; ಅಧಿಕೃತ ಪ್ರಕಟಣೆ ಹೊರಡಿಸಿದ ​ಒಲಿಂಪಿಕ್‌ ಸಮಿತಿ

ಮೈದಾನದಲ್ಲಿ ಎಚ್ಚರಿಕೆ ಅಗತ್ಯ

ಔಟ್ ಫೀಲ್ಡ್ ನಲ್ಲಿ ಹೆಚ್ಚು ಮರಳು ಇರುವ ಕಾರಣ ಆಟಗಾರರಿಗೆ ಗಾಯದ ಅಪಾಯವಿದೆ ಎಂದು ಈಗಾಗಲೇ ಇಲ್ಲಿ ಆಡಿರುವ ಇಂಗ್ಲೆಂಡ್​ ಮತ್ತು ಅಫಘಾನಿಸ್ತಾನ ತಂಡದ ಆಟಗಾರರು ಮತ್ತು ಕೋಚ್​ಗಳು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ಇಲ್ಲಿ ಪಂದ್ಯ ಆಡುವ ಇತರ ತಂಡಗಳಿಗೂ ಎಚ್ಚರಿಕೆಯಿಂದ ಆಡುವಂತೆ ಸಲಹೆಯನ್ನು ನೀಡಿದ್ದರು. ಹೀಗಾಗಿ ಆಟಗಾರರು ಫೀಲ್ಡಿಂಗ್​ ನಡೆಸುವಾಗ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ.

ವಿಶ್ವಕಪ್ ಆರಂಭಕ್ಕೂ ಮುನ್ನ ಪಂದ್ಯ ನಡೆಯುವ ಪ್ರತಿ ಮೈದಾನದ ನವೀಕರಣಕ್ಕೆ ಬಿಸಿಸಿಐ 50 ಕೋಟಿ ರೂ. ನೀಡಿತ್ತು. ಆದಾಗ್ಯೂ, ಧರ್ಮಶಾಲಾ ಮೇಲ್ಮೈಯ ನೋಟದಿಂದ ಯಾವುದೇ ಕೆಲಸ ನಡೆದಿಲ್ಲ ಎಂಬುದು ಸಾಬೀತಾಗಿದೆ.

ಸಂಭಾವ್ಯ ತಂಡ

ದಕ್ಷಿಣ ಆಫ್ರಿಕಾ:ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರಾಸ್ಸಿ ವಾನ್ ಡೆರ್ ಡುಸೆನ್, ಐಡೆನ್ ಮಾರ್ಕ್ರಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಲುಂಗಿ ಎನ್​ಗಿಡಿ, ತಬ್ರೈಜ್ ಶಮ್ಸಿ.

ನೆದರ್ಲೆಂಡ್ಸ್​: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓ ಡೌಡ್, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್, ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಸಾಕಿಬ್ ಜುಲ್ಫಿಕರ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.

Exit mobile version