Site icon Vistara News

Cyclone Michaung: ಅಸಹಾಯಕತೆ ಹೊರಹಾಕಿದ ಆರ್​.ಅಶ್ವಿನ್​

Ravichandran Ashwin

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡು ಬೀಸುತ್ತಿರುವ ಮಿಚಾಂಗ್‌ ಚಂಡಮಾರುತದ (Cyclone Michaung) ಹೊಡೆತಕ್ಕೆ ತಮಿಳುನಾಡು ಅಕ್ಷರಶಹ ನಲುಗಿ ಹೋಗಿದೆ.(Michaung hits Chennai) ಚಂಡಮಾರುತ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಮಳೆ ಉಂಟುಮಾಡಿದೆ. ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳು ಗರಿಷ್ಠ ಹೊಡೆತ ತಿಂದಿವೆ. ಕೋಟಿಗಟ್ಟಲೆ ಆಸ್ತಿ ಹಾನಿಯಾಗಿದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವಿಚಾರವಾಗಿ ಆರ್​. ಅಶ್ವಿನ್(Ravichandran Ashwin)​ ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಅಸಹಾಯಕತೆ ಹೊರಹಾಕಿದ್ದಾರೆ.

ಭಾರಿ ಮಳೆಯಿಂದಾಗಿ ಮರಗಳು ಧರೆಗುಳಿದಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ ಮತ್ತು ರಸ್ತೆಗಳೆಲ್ಲ ನದಿಯಂತಾಗಿದ್ದು, ವಿದ್ಯುತ್​ ಸಂಪರ್ಕ, ಮೊಬೈಲ್​ ಸಿಗ್ನಲ್​ ಮತ್ತು ನೀರಿನ ಪೂರೈಕೆ ಇಲ್ಲದೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸದ್ಯ ಬುಧವಾರ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಮನೆಗಳಿಗೆ ನುಗ್ಗಿದ ನೀರು ಇನ್ನು ತಗ್ಗಿಲ್ಲ. ಜನರ ಹೈರಾಣದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇಲ್ಲಿನ ಕೆಲ ನಟ-ನಟಿಯರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ನಿಂತಿದ್ದು ಆಹಾರ ಮತ್ತು ಔಷಧಗಳ ಪೂರೈಕೆಗೆ ಕೈ ಜೋಡಿಸಿದ್ದಾರೆ.

ಅಶ್ವಿನ್ ಮಾಡಿದ ಪೋಸ್ಟ್​ ವಿವರ​

ಆರ್​. ಅಶ್ವಿನ್​ ಅವರು ಚೆನ್ನೈಯ ವೆಸ್ಟ್ ಮಾಂಬಲಂನ ಪೋಸ್ಟಲ್ ಕಾಲನಿಯಲ್ಲಿ ವಾಸಿಸುತ್ತಿದ್ದು ಈ ಪ್ರದೇಶ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಪ್ರದೇಶದಲ್ಲಿ ಕಳೆದ 30 ಗಂಟೆಗಳಿಂದ ವಿದ್ಯುತ್​ ಪೂರೈಕೆ ಇಲ್ಲವಾಗಿದೆ. ಉಳಿದ ಪ್ರದೇಶಗಳ ಗತಿ ಏನು ಎಂಬುದನ್ನು ಊಹಿಸಲು ಅಸಾಧ್ಯ. ಬದುಕಲು ನಮ್ಮ ಮುಂದೆ ಯಾವ ಆಯ್ಕೆ ಉಳಿದಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ಬರೆದು ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ. ವಿದ್ಯುತ್ ಕಡಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬರ ಪೋಸ್ಟ್​ಗೆ ರೀಪ್ಲೇ ಮಾಡುವ ಮೂಲಕ ಅಶ್ವಿನ್​ ಅಳಲು ತೋಡಿಕೊಂಡಿದ್ದಾರೆ.

ನೆರವಿಗಾಗಿ ವಾರ್ನರ್​ ಮನವಿ

ಚೆನ್ನೈಯಲ್ಲಿ ಸಂಭವಿಸಿದ ಪ್ರವಾಹದ ಭೀಕರ ದೃಶ್ಯಗಳನ್ನು ನೋಡಿದ ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಹಿರಿಯ ಆಟಗಾರ ಡೇವಿಡ್​ ವಾರ್ನರ್​​, ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವಿನ ಹಸ್ತ ಚಾಚುವಂತೆ ಕರೆ ನೀಡಿದ್ದಾರೆ. ಪ್ರವಾಹದ ಭೀಕರ ದೃಶ್ಯಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಾರ್ನರ್​, “ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಎಲ್ಲರ ರಕ್ಷಣೆಗೆ ನಾನು ಪ್ರಾರ್ಥಿಸುತ್ತೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ. ಅಪಾಯದ ಸ್ಥಿತಿಯಲ್ಲಿರುವವರನ್ನು ರಕ್ಷಿಸುವ ಜತೆಗೆ ಸಹಾಯ ಹಸ್ತ ಚಾಚಿ. ನಾವೆಲ್ಲರೂ ಸೇರಿ ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಎಂದು ವಿನಂತಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ R Ashwin : ಏಕ ದಿನ ಕ್ರಿಕೆಟ್​ನಲ್ಲಿ ಭಾರತದ ಪಾರಮ್ಯ ಕಡಿಮೆಯಾಗಿದ್ದಕ್ಕೆ ಕಾರಣ ತಿಳಿಸಿದ ಆರ್​ ಅಶ್ವಿನ್​

Exit mobile version