ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಏಷ್ಯನ್ ಗೇಮ್ಸ್‌ಗೆ (Asian Games 2023) ಭಾರತ ಬಿ ತಂಡವನ್ನು ಕಳುಹಿಸಲು ಯೋಜನೆ ಹಾಕಿಕೊಂಡಿದೆ ಎಂಬುದಾಗಿ ವರದಿಯಾಗಿದೆ. ಆರಂಭದಲ್ಲಿ ತಂಡವನ್ನು ಕಳುಹಿಸುವುದಿಲ್ಲ ಎಂದು ಹೇಳುತ್ತಿದ್ದ ಬಿಸಿಸಿಐ ಕೊನೆ ಹಂತದಲ್ಲಿ ಯೂಟರ್ನ್ ಹೊಡೆದು ತಂಡವನ್ನು ಕಳುಹಿಸಲು ಒಪ್ಪಿಕೊಂಡಿತ್ತು. ಆದರೆ, ಈ ಟೂರ್ನಿಗೆ ಪ್ರಮುಖ ತಂಡವನ್ನು ಕಳುಹಿಸುವುದು ಬಿಸಿಸಿಐ ಯೋಜನೆಯಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಈ ತಂಡದಲ್ಲಿ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಇರುವುದಿಲ್ಲ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 5ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ (World Cup 2023) ಪ್ರಮುಖ ತಂಡ ಆಡಲಿದೆ ಎಂದು ಹೇಳಲಾಗುತ್ತಿದೆ.
ಜೂನ್ 30ರೊಳಗೆ ಆಟಗಾರರ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಕಳುಹಿಸಲು ಬಿಸಿಸಿಐ ಸಜ್ಜಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶಮಿ, ಬುಮ್ರಾ ಮತ್ತು ಕೆಎಲ್ ರಾಹುಲ್ ಅವರಂತಹ ಹಿರಿಯ ಆಟಗಾರರು 50 ಓವರ್‌ಗಳ ವಿಶ್ವಕಪ್‌ನಲ್ಲಿ ಆಡಬೇಕಾಗಿರುವ ಕಾರಣ ಬಿಸಿಸಿಐ ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ ಮತ್ತು ಉಮ್ರಾನ್ ಮಲಿಕ್ ಅವರಂತಹ ಆಟಗಾರರನ್ನು ಒಳಗೊಂಡಿರುವ ಬಿ ತಂಡವನ್ನು ಕಳುಹಿಸಲು ಮುಂದಾಗಿದೆ. ಈ ತಂಡಕ್ಕೆ ಶಿಖರ್ ಧವನ್ ನಾಯಕರಾಗಬಹುದು ಎಂದು ಅಂದಾಜಿಸಲಾಗಿದೆ.
2010 ಮತ್ತು 2014ರ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆಯ ಪಟ್ಟಿಯಲ್ಲಿತ್ತು. ಆದರೆ, ಬಿಸಿಸಿಐ ಭಾರತ ಮಹಿಳಾ ಮತ್ತು ಪುರುಷರ ತಂಡಗಳನ್ನು ಕಳುಹಿಸಿರಲಿಲ್ಲ. ಜಕಾರ್ತಾದಲ್ಲಿ ನಡೆದ 2018ರ ಆವೃತ್ತಿಯಲ್ಲಿ ಕ್ರಿಕೆಟ್ ಇರಲಿಲ್ಲ. ಇದೀಗ 2023ರಲ್ಲಿ ಚೀನಾದ ಹ್ಯಾಂಗ್ಜೌನಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಮರಳಿದೆ. ಈ ಕ್ರೀಡಾಕೂಟ 2022ರಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದಾಗಿ 2023ಕ್ಕೆ ಮುಂದೂಡಿಕೆಯಾಗಿದೆ.
ಇದನ್ನೂ ಓದಿ : Team India : ಇಂಜೆಕ್ಷನ್ ತೆಗೆದುಕೊಂಡು ಆಡುತ್ತಿದ್ದೆ! ಮಾಜಿ ವೇಗದ ಬೌಲರ್ ಸ್ಫೋಟಕ ಹೇಳಿಕೆ
ಕ್ರಿಕೆಟ್ ಒಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ರೀಡೆಗಳಲ್ಲಿ ನಾವು ಭಾಗವಹಿಸುವಿಕೆಯನ್ನು ಖಾತರಿಪಡಿಸಿದ್ದೇವೆ. ಬಿಸಿಸಿಐ ತಂಡದ ಹೆಸರು ಕೊಡದ ಕಾರಣ ಸಾಧ್ಯವಾಗಿಲ್ಲ ಎಂದು ಏಷ್ಯನ್ ಗೇಮ್ಸ್‌ಗೆ ಭಾರತದ ಚೆಫ್ ಡಿ ಮಿಷನ್ ಭೂಪೇಂದರ್ ಬಜ್ವಾ ಈ ಹಿಂದೆ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದರು. ಇದು ಸಣ್ಣ ಮಟ್ಟಿಗೆ ವಿವಾದಕ್ಕೆ ಕಾರಣವಾಗಿತ್ತು. ಅಂತಾರಾಷ್ಟ್ರೀಯ ಟೂರ್ನಿಗೆ ಭಾರತ ತಂಡವನ್ನು ಕಳುಹಿಸದ ಬಿಸಿಸಿಐ ನಿರ್ಧಾರಕ್ಕೆ ಟೀಕೆಗಳು ವ್ಯಕ್ತಗೊಂಡಿದ್ದವು. ನಾವು ಬಿಸಿಸಿಐಘೇ 3ರಿಂದ 4 ಇ ಮೇಲ್‌ಗಳನ್ನು ಕಳುಹಿಸಿದ್ದೇವೆ ಎಂದು ಬಜ್ವಾ ಹೇಳಿದ್ದರು. ಆದರೆ, ಬಿಸಿಸಿಐ ಈ ಹೇಳಿಕೆಯಿಂದ ನುಣುಚಿಕೊಳ್ಳಲು ಯತ್ನಿಸಿತ್ತು. ನಮಗೆ ತಡವಾಗಿ ಮೇಲ್ ಕಳುಹಿಸಿದ್ದರು ಎಂದ ಆರೋಪಿಸಿತ್ತು.
ಭಾರತವು ಏಕಕಾಲದಲ್ಲಿ ಎರಡು ರಾಷ್ಟ್ರೀಯ ತಂಡಗಳನ್ನು ಏಕಕಾಲಕ್ಕೆ ಕಣಕ್ಕಿಳಿಸುತ್ತಿರುವುದು ಇದು ಮೊದಲೇನಲ್ಲ . 1998ರಲ್ಲಿ ಕೌಲಾಲಂಪುರದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಒಂದು ಕ್ರಿಕೆಟ್ ತಂಡವು ಭಾಗವಹಿಸಿತ್ತು. ಮತ್ತೊಂದು ತಂಡವು ಸಹಾರಾ ಕಪ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಿತ್ತು. 2021ರಲ್ಲಿ, ಶಿಖರ್ ಧವನ್ ನೇತೃತ್ವದ ಎರಡನೇ ತಂಡವು ಶ್ರೀಲಂಕಾ ವಿರುದ್ಧ ಆಡುವಾಗ ಭಾರತವು ಎರಡೆರಡು ತಂಡಗಳನ್ನು ಕಣಕ್ಕಿಳಿಸಿತ್ತು. ವಿರಾಟ್ ಕೊಹ್ಲಿ ನೇತೃತ್ವದ ಮತ್ತೊಂದು ತಂಡವು ಲಂಡನ್‌ನಲ್ಲಿ ಟೆಸ್ಟ್ ಸರಣಿಯನ್ನು ಆಡಿತ್ತು.