ಸ್ಟಾವಂಜರ್ (ನಾರ್ವೆ): ಶನಿವಾರ ಮುಕ್ತಾಯ ಕಂಡ ನಾರ್ವೆ ಚೆಸ್(Norway Chess) ಟೂರ್ನಿಯಲ್ಲಿ ಭಾರತದ ಪ್ರಜ್ಞಾನಂದ(R Praggnanandhaa) ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇಂದು ನಡೆದ 10ನೇ ಹಾಗೂ ಅಂತಿಮ ಸುತ್ತಿನ ಪಂದ್ಯದ ಬಳಿಕ ಅಗ್ರಸ್ಥಾನ ಉಳಿಸಿಕೊಂಡ ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್(17.5 ಪಾಯಿಂಟ್ಸ್) ಚಾಂಪಿಯನ್ ಪಟ್ಟ ಅಲಂಕರಿಸಿದರು. ಹಿಕಾರು ನಕಮುರಾ- (15.5 ಪಾಯಿಂಟ್ಸ್) ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದ ಸೋದರಿ ವೈಶಾಲಿ(Vaishali) 4ನೇ ಸ್ಥಾನ ಪಡೆದರೆ, ಕೊನೆರು ಹಂಪಿ(Koneru Humpy) 5ನೇ ಸ್ಥಾನ ಪಡೆದರು. ಚೀನಾದ ಗ್ರ್ಯಾಂಡ್ ಮಾಸ್ಟರ್ ಜು ವೆಂಜುನ್ ಮೊದಲ ಸ್ಥಾನ ಪಡೆದರು.
7ನೇ ಸುತ್ತಿನಲ್ಲಿ ಪ್ರಜ್ಞಾನಂದ ವಿಶ್ವ ಚಾಂಪಿಯನ್, ಚೀನದ ಡಿಂಗ್ ಲಿರೆನ್ ವಿರುದ್ಧ, ಹಾಗೂ 10ನೇ ಸುತ್ತಿನಲ್ಲಿ ಜಪಾನ್ ನ ಹಿಕಾರು ನಕಮುರ ವಿರುದ್ಧ ಜಯ ಸಾಧಿಸಿದರೂ ಅಂಕ ಗಳಿಕೆಯಲ್ಲಿ ಮೇಲೇರಲು ಸಾಧ್ಯವಾಗದೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದೇ ಟೂರ್ನಿಯಲ್ಲಿ ಪ್ರಜ್ಞಾನಂದ, ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen)ಗೆ ಸೋಲುಣಿಸಿದ್ದರು.
ಕಳೆದ ವರ್ಷ ನಡೆದಿದ್ದ ವಿಶ್ವಕಪ್ ಚೆಸ್ ಟೂರ್ನಿಯ(Chess World Cup) ಫೈನಲ್ ಪಂದ್ಯದಲ್ಲಿ ಪ್ರಜ್ಞಾನಂದ ತೀವ್ರ ಪೈಪೋಟಿ ನೀಡಿ ಸಣ್ಣ ಅಂತರದಿಂದ ಸೋಲು ಕಂಡಿದ್ದರು. ಫೈನಲ್ ಪಂದ್ಯದ ಟೈ ಬ್ರೇಕರ್ನ ಮೊದಲ ಸೆಟ್ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿ, ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್ ಕಾರ್ಲ್‌ಸನ್ ಗೆದ್ದು ವಿಶ್ವ ಕಿರೀಟ ತಮ್ಮದಾಗಿಸಿಕೊಂಡಿದ್ದರು. ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದರು.
ಇದನ್ನೂ ಓದಿ Norway Chess: ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ಸನ್ಗೆ ಸೋಲುಣಿಸಿದ ಪ್ರಜ್ಞಾನಂದ
18 ವರ್ಷದ ಚೆಸ್ ಆಟಗಾರ ಯಾವಾಗಲೂ ತನ್ನ ತಾಯಿ ನಾಗಲಕ್ಷ್ಮಿ ಅವರ ಜತೆಗೆ ಇರುವ ಪ್ರತಿಭೆ. ತಾಯಿಯೂ ಪ್ರತಿ ಕ್ಷಣವೂ ಮಗನ ಜತೆಗೆ ಇರುತ್ತಾರೆ. ಈ ಮೂಲಕ ಅವರು ಪುತ್ರನ ಯಶಸ್ಸಿನ ಬಲವಾದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.
ತಾಯಿಯ ಬಗ್ಗೆ ಮೆಚ್ಚುಗೆಯ ಮಾತು
“ಫಿಡೆ ವಿಶ್ವಕಪ್ 2023 ರಲ್ಲಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಮತ್ತು 2024 ರ ಕ್ಯಾಂಡಿಡೇಟ್ಸ್ ಈವೆಂಟ್ಗೆ ಅರ್ಹತೆ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ! ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳನ್ನು ಸ್ವೀಕರಿಸಲು ಕೃತಜ್ಞರಾಗಿರುತ್ತೇನೆ! ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು, ನನ್ನ ಸದಾ ಬೆಂಬಲ, ಸಂತೋಷ ಮತ್ತು ಹೆಮ್ಮೆಯ ಅಮ್ಮ” ಎಂದು ಪ್ರಜ್ಞಾನಂದ ಬರೆದುಕೊಂಡಿದ್ದರು.