Site icon Vistara News

ರಾಷ್ಟ್ರ ಧ್ವಜವನ್ನು ಕಂಡು ಶ್ರೇಯಸ್​​ಗೆ ಪ್ರಶ್ನೆ ಕೇಳಲು ಸಾಧ್ಯವಾಗಲಿಲ್ಲ; ಗವಾಸ್ಕರ್​

Sunil Gavaskar

ಕೋಲ್ಕೊತಾ: ಟೀಮ್​ ಇಂಡಿಯಾದ ಮಾಜಿ ಆಟಗಾರ ಸುನೀಲ್​ ಗವಾಸ್ಕರ್(Sunil Gavaskar)​ ಅವರು ಕಳೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದ ವೇಳೆ ಕೊಂಚ ಗರಂ ಆಗಿ ಮಾತನಾಡಿದ್ದಾರೆ. ಪಂದ್ಯ ವೀಕ್ಷಿಸಲು ಬಂದ ಕೆಲ ಪ್ರೇಕ್ಷಕರು ರಾಷ್ಟ್ರ ಧ್ವಜಕ್ಕೆ ಅವಮಾನ(Confiscate flag) ಮಾಡಿದ್ದಾರೆ, ಇದನ್ನು ನಾನು ಸಹಿಸಿಕೊಳ್ಳುವುದಿಲ್ಲ ಎಂದು ನೇರ ಪ್ರಸಾರದಲ್ಲೇ ಖಂಡಿಸಿದ್ದಾರೆ. ಜತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಅವರು ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಅಲ್ಲದೆ ಇದಕ್ಕು ಹಿಂದಿನ ಪಂದ್ಯದಲ್ಲಿಯೂ ಅವರು ನಿರೀಕ್ಷಿತ ಬ್ಯಾಟಿಂಗ್​ ನಡೆಸಿ ಗಮನಸೆಳೆದಿದ್ದರು. ಇದೇ ವಿಚಾರವಾಗಿ ರವಿಶಾಸ್ತ್ರಿ ಅವರು ಪಂದ್ಯದ ಬಳಿಕ ಅಯ್ಯರ್​ ಬಳಿ ತಮ್ಮ ಈ ಪ್ರದರ್ಶನದ ಬಗ್ಗೆ ಒಂದೆರಡು ಪ್ರಶ್ನೆಯನ್ನು ಕೇಳಿದರು. ಆದರೆ ಶಾಸ್ತ್ರಿ ಜತೆಗಿದ್ದ ಗವಾಸ್ಕರ್​ ಅವರು ಒಂದು ಮಾತು ಕೂಡ ಆಡದೆ ಕೈಯಲ್ಲೇ ಮೈಕ್ ಹಿಡಿದು ಸುಮ್ಮನೆ ಸಿಟ್ಟಿನಲ್ಲಿ ನಿಂತಿದ್ದರು.

ಪೊಲೀಸರಿಗೆ ದೂರು ನೀಡುತ್ತೇನೆ

ಯಾವುದೇ ಮಾತುಗಳನ್ನಾಡದೆ ನಿಂತಿದ್ದ ಗವಾಸ್ಕರ್​ ಅವರ ಬಳಿ ಕ್ರೀಡಾ ನಿರೂಪಕಿ ಮಯಂತಿ ಲ್ಯಾಂಗರ್‌ ಅವರು ನೀವು ಯಾಕೆ ಯಾವುದೇ ಪ್ರಶ್ನೆ ಕೇಳಿಲ್ಲ ಎಂದು ಕೇಳಿದ್ದಾರೆ. ಇದೇ ವೇಳೆ ಸಿಟ್ಟಿನಲ್ಲಿದ್ದ ಗವಾಸ್ಕರ್​, ನಾನು ಅಯ್ಯರ್​ ಬಳಿಕ ಒಂದೆರಡು ಪ್ರಶ್ನೆ ಕೇಳಬೇಕೆಂದು ನಿರ್ಧರಿಸಿದ್ದೆ. ಆದರೆ ಇಲ್ಲಿ ಪ್ರೇಕ್ಷಕರು ತೋರಿದ ವರ್ತನೆಯಿಂದ ನನ್ನ ಏಕಾಗ್ರತೆ ಕಳೆದುಕೊಂಡೆ ಎಂದರು. ಕೆಲ ಪ್ರೇಕ್ಷಕರು ಭಾರತದ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಧ್ವಜದ ಮೇಲೆ ಚಿತ್ರಗಳನ್ನು ಬರೆದಿರುವುದನ್ನು ನಾನು ನೋಡಿದೆ. ಇದು ನಮ್ಮ ದೇಶಕ್ಕೆ ಮಾಡಿದ ಅವಮಾನ, ಯಾವುದೇ ಕಾರಣಕ್ಕೂ ನಾನು ಇದನ್ನು ಸಹಿಸಿಕೊಳ್ಳುವುದಿಲ್ಲ. ಇದರ ಬಗ್ಗೆ ನಾನು ಪೊಲೀಸರಿಗೆ ದೂರು ನೀಡುತ್ತೇನೆ. ಇಂತಹ ಘಟನೆಗಳು ಮುಂದೆ ಮರುಕಳಿಸಬಾರದು ಎಂದು ಏರು ಧ್ವನಿಯಲ್ಲೇ ಹೇಳಿದರು. ಈ ವೇಳೆ ಮಯಂತಿ ಲ್ಯಾಂಗರ್‌ ಸಮಧಾನ ಮಾಡಲು ಮುಂದಾದರು ಗವಾಸ್ಕರ್​ ಮಾತ್ರ ತಮ್ಮ ಎಲ್ಲ ಸಿಟ್ಟನ್ನು ಹೊರಹಾಕಿದರು. ಇದರ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ ಬಹಿರಂಗವಾಗಿಯೇ ಶಕೀಬ್​, ಬಾಂಗ್ಲಾ ತಂಡಕ್ಕೆ ಜಾಡಿಸಿದ ಏಂಜೆಲೊ ಮ್ಯಾಥ್ಯೂಸ್‌

“ಹೌದು, ನಾನು ಶ್ರೇಯಸ್​ಗೆ ಏನನ್ನಾದರೂ ಕೇಳಲು ಬಯಸಿದ್ದೆ, ಆದರೆ ಕಂಪನಿಯ ಹೆಸರಿನೊಂದಿಗೆ ಭಾರತೀಯ ಧ್ವಜವನ್ನು ಕಂಡ ಕಾರಣ ನಾನು ಸ್ವಲ್ಪ ವಿಚಲಿತನಾದೆ. ಭಾರತದ ಧ್ವಜವನ್ನು ಯಾವುದರಿಂದಲೂ ವಿರೂಪಗೊಳಿಸಲು ನಾನು ಬಿಡುವುದಿಲ್ಲ. ಇನ್ನು ಮುಂದೆ ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಭಾರತದ ಧ್ವಜವನ್ನು ತರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದರು. ಗವಾಸ್ಕರ್​ ಅವರ ಈ ಮಾತು ಕೇಳಿದ ಅನೇಕ ಭಾರತೀಯರು ರಾಷ್ಟ್ರದ ಬಗ್ಗೆ ಇರುವ ಕಾಳಜಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಹಿಂದೊಮ್ಮೆ ಅಯ್ಯರ್​ ಅವರ ಬ್ಯಾಟಿಂಗ್​ ಪ್ರದರ್ಶನವನ್ನು ಕೊಂಡಾಡಿದ್ದ ಗವಾಸ್ಕರ್​, ಅಯ್ಯರ್ ಅವರ ಬ್ಯಾಟಿಂಗ್‌ ಬುದ್ಧಿವಂತಿಕೆಯಿಂದ ಕೂಡಿದೆ. ಅವರು ಹೊಡೆಯುವ ಕೆಲ ಹೊಡೆತಗಳು ಟೆನಿಸ್​ನಲ್ಲಿ ಆಡಿದ ರೀತಿ ಕಂಡುರುತ್ತದೆ. ಟೆನಿಸ್ ತಾರೆಗಳಾದ ಜೊಕೊವಿಕ್ ಅಥವಾ ರೋಜರ್ ಫೆಡರರ್ ಅವರ ಫೋರ್‌ಹ್ಯಾಂಡ್‌ ಶಾಟ್​ನಂತೆ ಭಾಸವಾಗುತ್ತಿತ್ತು. ತಮ್ಮ ಆಡದಲ್ಲಿ ಅವರು ವಿಶ್ವಾಸ ಹೊಂದಿದ್ದಾರೆ ಎಂದು ಗವಾಸ್ಕರ್ ಹೊಗಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version