ಮುಂಬಯಿ: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ(ICC World Cup) ತಂಡಗಳ ಸಂಯೋಜನೆ ಹೇಗಿರಬೇಕೆಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಈ ಪಟ್ಟಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಕೂಡ ಸೇರಿಕೊಂಡಿದ್ದಾರೆ. ಈ ಬಾರಿಯ ವಿಶ್ವ ಕಪ್ನಲ್ಲಿ ಬಿಸಿಸಿಐ ಯಾವ ವಿಭಾಗದಲ್ಲಿ ಹೆಚ್ಚಿನ ನಿಗಾ ವಹಿಸಿಬೇಕೆಂದು ಅತ್ಯಮೂಲ್ಯ ಸಲಹೆಯೊಂದನ್ನು ನೀಡಿದ್ದಾರೆ.
ವಿಶ್ವ ಕಪ್ಗೆ ತಂಡದ ಆಯ್ಕೆ ಹೇಗಿರಬೇಕು, ಯಾವ ಆಟಗಾರರನ್ನು ಆಡಿಸಿದರೆ ಸೂಕ್ತ ಎಂಬ ವಿಚಾರವಾಗಿ ಮಾತನಾಡಿರುವ ಗಂಗೂಲಿ, ಭಾರತೀಯ ಪರಿಸ್ಥಿತಿಗಳಲ್ಲಿ ಮಣಿಕಟ್ಟಿನ ಸ್ಪಿನ್ನರ್ಗಳು ತಂಡದಲ್ಲಿದ್ದರೆ ಉತ್ತಮ. ಹೀಗಾಗಿ ಯುವ ಸ್ಪಿನ್ನರ್ ರವಿ ಬಿಷ್ಣೊಯಿ, ಯಜುವೆಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಅವರ ಮೇಲೆ ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿಶೇಷ ನಿಗಾ ಇರಿಸಿಕೊಳ್ಳಬೇಕು, ಅದರಲ್ಲೂ ಚಹಲ್ ಅನೇಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವವಿದೆ. ಆದರೆ ಇತ್ತೀಚೆಗೆ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿಲ್ಲ. ನನ್ನ ಪ್ರಕಾರ ಭಾರತದಲ್ಲಿ ಅವರು ಉತ್ತಮ ಬೌಲಿಂಗ್ ನಡೆಸುವ ಸಾಮರ್ಥ್ಯಹೊಂದಿದ್ದಾರೆ. ಹೀಗಾಗಿ ಅವರನ್ನು ಮೊದಲ ಸ್ಪಿನ್ ಆಯ್ಕೆಯಾಗಿ ಪರಿಗಣಿಸಬೇಕು ಎಂದಿದ್ದಾರೆ. ಗಂಗೂಲಿ ಹೇಳಿಕೆ ಗಮನಿಸುವಾಗ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಅವರನ್ನು ವಿಶ್ವ ಕಪ್ ತಂಡದಿಂದ ಕೈ ಬಿಡಬೇಕು ಎಂಬಂತೆ ತೋರುತ್ತಿದೆ.
“ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿರುದ್ಧ ಆಡುವಾಗ ಮಣಿಕಟ್ಟಿನ ಸ್ಪಿನ್ನರ್ ಇದ್ದರೆ ತಂಡಕ್ಕೆ ಹೆಚ್ಚಿನ ಲಾಭ. ಇದಕ್ಕೆ 2011 ರಲ್ಲಿ ಪಿಯೂಷ್ ಚಾವ್ಲಾ ಅವರ ಆಯ್ಕೆಯೇ ಉತ್ತಮ ನಿದರ್ಶನ. ಅವರು ಆ ವಿಶ್ವಕಪ್ನಲ್ಲಿ ಹರ್ಭಜನ್ ಜತೆ ಉತ್ತಮ ಬೌಲಿಂಗ್ ಮಾಡಿದ್ದರು” ಎಂದು ಗಂಗೂಲಿ ಹೇಳಿದರು.
ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟಕ್ಕೆ ದಿನಾಂಕ ಫಿಕ್ಸ್
“ನಾವು 2007 ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋದಾಗ ವೇಗದ ಬೌಲರ್‌ಗಳ ಜತೆಗೆ ನಮ್ಮ ತಂಡ ಮಣಿಕಟ್ಟಿನ ಸ್ಪಿನ್ನರ್‌ಗಳಿಗೆ ಪ್ರಮುಖ ಆದ್ಯತೆ ನೀಡಿದ್ದೆವು. ಇದು ನಮಗೆ ಉತ್ತಮ ಫಲಿತಾಂಸ ದಾಖಲಿಸಲು ಸಾಧ್ಯವಾಯಿತು. ಹರ್ಭಜನ್ ಸಿಂಗ್ ಈ ಅಸರಣಿಯಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದರು. ಭಾರತೀಯ ಪರಿಸ್ಥಿತಿಗಳಲ್ಲಿ ಮಣಿಕಟ್ಟಿನ ಸ್ಪಿನ್ನರ್ಗಳು ತಂಡದಲ್ಲಿದ್ದರೆ ಒಳಿತು” ಎಂದು ಗಂಗೂಲಿ ಬಿಸಿಸಿಐಗೆ ಸೂಕ್ತ ಸಲಹೆಯೊಂದನ್ನು ನೀಡಿದ್ದಾರೆ.
ಭಾರತ ತಂಡ ತನ್ನ ವಿಶ್ವ ಕಪ್ ಅಭಿಯಾನವನ್ನು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 8 ರಂದು ಚೆನ್ನೈಯಲ್ಲಿ ನಡೆಯಲಿದೆ. ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಟ ನಡೆಸಲಿದೆ.