ಮುಂಬಯಿ: ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸರಿ ಸುಮಾರು ಒಂದುವರೆ ವರ್ಷಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಜಸ್ಪ್ರೀತ್ ಬುಮ್ರಾ(Jasprit Bumrah Fitness) ಅವರ ಕ್ರಿಕೆಟ್ ಕಮ್ಬ್ಯಾಕ್ಗೆ ಕಾಲ ಸನ್ನಿಹಿತವಾದಂತಿದೆ. ಬಹುನಿರೀಕ್ಷಿತ ಏಷ್ಯಾ ಕಪ್(Asia Cup) ಟೂರ್ನಿಗೂ ಮುನ್ನವೇ ಬುಮ್ರಾ ಟೀಮ್ ಇಂಡಿಯಾ ಸೇರಲಿದ್ದಾರೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.
ಐಸಿಸಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡ ಸಂದರ್ಭದಲ್ಲಿ ಬುಮ್ರಾ ಅವರು ಏಷ್ಯಾ ಕಪ್ ವೇಳೆ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಈ ಟೂರ್ನಿಗೂ ಮುನ್ನವೇ ಅವರು ಭಾರತ ತಂಡದ ಪರ ಆಡಲಿದ್ದಾರೆ ಎಂದು ತಿಳಿದುಬಂದಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬುಮ್ರಾ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ಮುಂಬರುವ ಐರ್ಲೆಂಡ್ ವಿರುದ್ಧ ಟಿ20 ಸರಣಿಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಸದ್ಯ ಬೆಂಗಳೂರಿನ ಎನ್ಸಿಎಯಲ್ಲಿರುವ ಬುಮ್ರಾ ದಿನಕ್ಕೆ 8ರಿಂದ 10 ಓವರ್ ಬೌಲಿಂಗ್ ನಡೆಸುತ್ತಿದ್ದಾರೆ. ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವರದಿಯಾಗಿದೆ.
ತೀವ್ರ ತರದ ಬೆನ್ನುನೋವಿನಿಂದ ಬಳಲುತ್ತಿದ್ದ ಬುಮ್ರಾ ಅವರು ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯದ ಭಾರತ ಪ್ರವಾಸದಲ್ಲಿ 29 ರ ಹರೆಯದ ವೇಗಿ ಎರಡು ಟಿ20 ಪಂದ್ಯಗಳನ್ನು ಆಡಿದ ನಂತರ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಏಷ್ಯಾ ಕಪ್, ಟಿ20 ವಿಶ್ವಕಪ್ ಐಪಿಎಲ್ ಸೇರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೂಡ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಐರ್ಲೆಂಡ್ ಸರಣಿಯಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ Team India | ಟಿ20 ವಿಶ್ವ ಕಪ್ ತಂಡಕ್ಕೆ ದೀಪಕ್ ಚಾಹರ್ ಆಯ್ಕೆಯಾದರೆ ಲಾಭ ಎಂದ ಮಾಜಿ ಕ್ರಿಕೆಟಿಗ
ಬುಮ್ರಾ ಅವರು ತಂಡ ಸೇರಿದರೆ ವಿಶ್ವ ಕಪ್ ಟೂರ್ನಿಗೂ ಮುನ್ನವೇ ಭಾರತ ತಂಡ ನಿರಾಳವಾಗಲಿದೆ. ಇಷ್ಟು ದಿನ ತಂಡದ ಪ್ರಧಾನ ಬೌಲರ್ ಸೇವೆಯನ್ನು ಕಳೆದುಕೊಂಡು ಪ್ರಮುಖ ಟೂರ್ನಿಯನ್ನು ಕಳೆದುಕೊಂಡಿದ್ದ ಭಾರತಕ್ಕೆ ಬುಮ್ರಾ ಆಗಮನದ ಸುದ್ದಿ ಸಂತಸ ತಂದಿದೆ.