Site icon Vistara News

ಯಾರನ್ನೂ ಬಲವಂತ ಮಾಡಲ್ಲ ಎಂದು ಇಶಾನ್​ಗೆ ಎಚ್ಚರಿಕೆ ನೀಡಿದ ದ್ರಾವಿಡ್​!

ishan kishan and rahul dravid

ಮುಂಬಯಿ: ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಬಳಿಕ ಭಾರತ ತಂಡದಿಂದ ದೂರ ಇರುವ ಇಶಾನ್​ ಕಿಶನ್(Ishan Kishan)​ ಯಾವಾಗ ತಂಡಕ್ಕೆ ಮರಳಲಿದ್ದಾರೆ?, ಅವರುನ್ನು ತಂಡದಿಂದ ಏಕೆ ದೂರ ಇಡಲಾಗಿದೆ?, ಶಿಸ್ತು ಉಲ್ಲಂಘನೆಯೇ ಕಾರಣವೇ? ಈ ಎಲ್ಲ ಪ್ರಶ್ನೆಗಳಿಗೆ ಕೋಚ್​ ರಾಹುಲ್​ ದ್ರಾವಿಡ್(Rahul Dravid)​ ಉತ್ತರ ನೀಡಿದ್ದಾರೆ.

ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್​ ರಾಹುಲ್​ ದ್ರಾವಿಡ್​,”ನಾವು ಯಾವುದೇ ಆಟಗಾರರನ್ನು ಬಲವಂತವಾಗಿ ಆಡಿಸಲು ಸಾಧ್ಯವಿಲ್ಲ. ನಾನು ಇಶಾನ್​ಗೆ ದೇಶೀಯ ಕ್ರಿಕೆಟ್ ಆಡಲೇಬೇಕೆಂದು ಹೇಳಲಿಲ್ಲ. ಅವರು ಯಾವಾಗ ಕ್ರಿಕೆಟ್​ ಆಡಲು ಸಿದ್ಧವೋ ಆ ವೇಳೆ ಸ್ವಲ್ಪ ಕ್ರಿಕೆಟ್ ಆಡಬೇಕು ಮತ್ತು ಹಿಂತಿರುಗಬೇಕು ಎಂದು ಹೇಳಿದ್ದೆ, ಆಯ್ಕೆ ಅವರುದು, ನಾವು ಎಲ್ಲವನ್ನೂ ಮಾಡಲು ಅವರನ್ನು ಒತ್ತಾಯಿಸುತ್ತಿಲ್ಲ,” ಎಂದು ತಂಡದ ಮ್ಯಾನೇಜ್‌ಮೆಂಟ್ ನಿಲುವನ್ನು ಸ್ಪಷ್ಟಪಡಿಸಿದರು. ಜತೆಗೆ ಇಶಾನ್​ಗೆ ಪರೋಪಕ್ಷವಾಗಿ ಖಡಕ್​ ಎಚ್ಚರಿಕೆಯೊಂದನ್ನು ಕೂಡ ನೀಡಿದ್ದಾರೆ.

ದುಬೈನಲ್ಲಿ ಪಾರ್ಟಿ ಮಾಡಿದ್ದ ಇಶಾನ್​


ಇಶಾನ್ ಕಿಶನ್​ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇನ್ನೇನು ಸರಣಿ ಆರಂಭಕ್ಕೆ ಒಂದೆರಡು ದಿನಗಳು ಬಾಕಿ ಇರುವಾಗ ಮಾನಸಿಕ ಸಮಸ್ಯೆಯ ವಿಷಯವನ್ನು ಮುನ್ನೆಲೆಗೆ ತಂದು ಈ ಸರಣಿಯಿಂದ ಹಿಂದೆ ಸರಿದಿದ್ದರು.
ಹೀಗಾಗಿ ಕೊನೇ ಕ್ಷಣದಲ್ಲಿ ಕೆ. ಎಸ್​ ಭರತ್ ಅವರನ್ನು ಬಿಸಿಸಿಐ ದಕ್ಷಿಣ ಆಫ್ರಿಕಾಗೆ ಕಳುಹಿಸಿತ್ತು. ರಜೆ ಪಡೆದಿದ್ದ ಇಶಾನ್​ ನೆರವಾಗಿ ಭಾರತಕ್ಕೆ ಬರುವ ಬದಲು ದುಬೈನಲ್ಲಿ ಇಳಿದು ಪಾರ್ಟಿಗೆ ಹೋಗಿದ್ದರು. ಬಳಿಕ ದ್ರಾವಿಡ್​ ಅವರು ರಣಜಿ ಆಡುವಂತೆ ಸೂಚನೆ ನೀಡಿದರೂ ಕೂಡ ಇದನ್ನು ಇಶಾನ್​ ಕಡೆಗಣಿಸಿದ್ದರು. ಹೀಗಾಗಿ ಶಿಸ್ತು ಕ್ರಮದ ಉಲ್ಲಂಘನೆಯಾಗಿರುವ ಕಾರಣ ಅವರನ್ನು ತಂಡಕ್ಕೆ ಪರಿಗಣಿಸಿಲ್ಲ ಎಂಬುದಾಗಿ ವರದಿಯಾಗಿತ್ತು.

ಇಶಾನ್​ ಕಿಶನ್ ಚರ್ಚೆಯ ವ್ಯಾಪ್ತಿಯೊಳಗೆ ಬಂದಿರುವುದು ಇದೇ ಮೊದಲಲ್ಲ. 2016 ರಲ್ಲಿ, ಭಾರತದ ಅಂಡರ್ 19 ಕ್ರಿಕೆಟ್ ತಂಡದ ನಾಯಕರಾಗಿದ್ದ ಯುವ ಕ್ರಿಕೆಟಿಗನನ್ನು ರಾಶ್ ಡ್ರೈವಿಂಗ್ ಕಾರಣಕ್ಕೆ ಪಾಟ್ನಾದಲ್ಲಿ ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ನಡೆದ ಜೂನಿಯರ್ ವಿಶ್ವಕಪ್​​ಗೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿತ್ತು. ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆಯನ್ನು ಅಪಾಯಕ್ಕೆ ಸಿಲುಕಿಸಿತ್ತು. ಕೊನೆಗೂ ಅವರು ಬಚಾವಾಗಿದ್ದರು.

ಇದನ್ನೂ ಓದಿ IND vs ENG: ಸೋಲಿನ ಬೆನ್ನಲ್ಲೇ ಅಬುಧಾಬಿಗೆ ತೆರಳಿದ ಇಂಗ್ಲೆಂಡ್​ ತಂಡ; ಕಾರಣವೇನು?

ಬಿಹಾರ ಮೂಲದ ಇಶಾನ್​ ಜಾರ್ಖಂಡ್ ಪರ ಆಡುವ ವೇಳೆ ತನ್ನ ತಂದೆಯ ಕಾರನ್ನು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿಕೊಂಡು ಹೋಗಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಅದರಲ್ಲಿದ್ದವರು ಗಾಯಗೊಂಡಿದ್ದರು. ಪ್ರಕರಣ ದಾಖಲಾಗದಿದ್ದರೂ, ಕೋಪಗೊಂಡ ಸ್ಥಳೀಯರು ಕಿಶನ್ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತ್ತು. ಕಿಶನ್ ಅವರ ತಂದೆ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಮತ್ತು ಆಟೋ ರಿಕ್ಷಾ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಬಳಿಕ ಜಗಳ ಕೊನೆಗೊಂಡಿತ್ತು. ಆದರೆ ಪೊಲೀಸರು ಇಶಾನ್ ಕಿಶನ್ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದರು. ಅವರು ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಗಿತ್ತು.

ಇದೇ ವೇಳೆ ವಿರಾಟ್​ ಕೊಹ್ಲಿ ಅವರು ಮೂರನೇ ಟೆಸ್ಟ್​ಗೆ ಮರಳುವ ಕುರಿತು ಇನ್ನೆಡರು ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ಆಯ್ಕೆ ಸಮಿತಿ ಅವರ ಬಳಿ ಮಂಗಳವಾರ(ಇಂದು) ಚರ್ಚೆ ನಡೆಸಲಿದೆ ಎಂದು ದ್ರಾವಿಡ್​ ಹೇಳಿದರು.

Exit mobile version