ಮುಂಬಯಿ: ಐಸಿಸಿ ಏಕದಿನ ವಿಶ್ವಕಪ್(ICC World Cup 2023)ಅಭ್ಯಾಸ ಪಂದ್ಯಗಳು ಆರಂಭಗೊಂಡಿದೆ. ಟೂರ್ನಿಯ ಲೀಗ್ ಪಂದ್ಯಗಳು ಗುರುವಾರದಿಂದ ಆರಂಭಗೊಳ್ಳಲಿದೆ. ಈ ಬಾರಿ ಯಾವ ತಂಡ ಗೆಲ್ಲಬಹುದೆಂದು ಈಗಾಗಲೇ ಹಲವು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದ್ದಾರೆ. ಹೆಚ್ಚಾಗಿ ಎಲ್ಲರು ಭಾರತವೇ ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳಿದ್ದಾರೆ. ಆದರೆ ಬಹುಪಾಲು ಭಾರತೀಯ ಮಾಜಿ ಆಟಗಾರರು ಭಾರತ ತಂಡ ವಿಶ್ವಕಪ್ ಗೆಲ್ಲುವುದು ಅಸಾಧ್ಯವೆಂದು ಹೇಳಿದ್ದಾರೆ. ಚೊಚ್ಚಲ ವಿಶ್ವಕಪ್ ವಿಜೇತ ತಂಡದ ಆಟಗಾರ ಸುನೀಲ್ ಗವಾಸ್ಕರ್(Sunil Gavaskar) ಕೂಡ ಭಾರತ ತಂಡ ವಿಶ್ವಕಪ್ ಗೆಲ್ಲುವುದು ಕಷ್ಟ ಎಂದು ಹೇಳಿದ್ದಾರೆ.
ವಿಶ್ವಕಪ್ ಕುರಿತ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡ ಗವಾಸ್ಕರ್, ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಈ ಬಾರಿಯೂ ಕಪ್ ಗೆಲ್ಲಲಿದೆ ಎಂದು ಹೇಳಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಅತ್ಯುತ್ತಮ ವಿಶ್ವದರ್ಜೆಯ ಆಟಗಾರರಿದ್ದಾರೆ. ಬ್ಯಾಟಿಂಗ್,ಬೌಲಿಂಗ್ ಮತ್ತು ಫಿಲ್ಡಿಂಗ್ ಎಲ್ಲ ವಿಭಾಗದಲ್ಲಿ ಸಮರ್ಥವಾಗಿದೆ. ಅದರಲ್ಲೂ ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಿಲಿದ್ದು ಇಂಗ್ಲೆಂಡ್ಗೆ ಆನೆ ಬಲ ಬಂದಂತಾಗಿದೆ. ಸ್ಟೋಕ್ಸ್ ಯಾವ ಹಂತದಲ್ಲಿಯೂ ಪಂದ್ಯದ ದಿಕ್ಕನ್ನು ಬದಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಇಂಗ್ಲೆಂಡ್ ಈ ಬಾರಿಯೂ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದಿದ್ದಾರೆ.
ಇದನ್ನೂ ICC World Cup 2023: ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಭಾರತದ ಪ್ರ್ಯಾಕ್ಟೀಸ್ ಗೇಮ್
ಭಾರತ ತಂಡ ಸೆಮಿಫೈನಲ್ ಪ್ರವೇಶ ಪಡೆಯಬಹುದು. ಏಕೆಂದರೆ ಭಾರತ ತಂಡ ಆಟಗಾರರ ಆಯ್ಕೆಯಲ್ಲಿ ಎಡವಿದೆ. ನಿಂತು ಆಡುವ ಆಟಗಾರರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಯುವರಾಜ್ ಸಿಂಗ್ ಅವರಂತಹ ಮ್ಯಾಚ್ ವಿನ್ನಿಂಗ್ ಆಲ್ರೌಂಡರ್ ತಂಡದಲ್ಲಿ ಇರದಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಲಿದೆ ಎಂದರು.
ಆಸ್ಟ್ರೇಲಿಯಾಗೆ ವಿಶ್ವಕಪ್!
ಗೌತಮ್ ಗಂಭೀರ್ ಕೂಡ ಈ ಹಿಂದೆ ವಿಶ್ವಕಪ್ ಕುರಿತು ಭವಿಷ್ಯ ನುಡಿದಿದ್ದರು. ಅವರ ಪ್ರಕಾರ ಈ ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲ್ಲಲಿದೆಯಂತೆ. ಏಕೆಂದರೆ ಈ ತಂಡದಲ್ಲಿ ಉತ್ತಮ ಆಲ್ರೌಂಡರ್, ಅದ್ಭುತ ವೇಗಿಗಳು ಕಾಣಿಸಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೂಡ ಕಪ್ ಗೆಲ್ಲುವುದು ಕಷ್ಟ ಆದರೆ ಫೈನಲ್ ಪ್ರವೇಶಿಸಬಹುದು. ಭಾರತ ಮಾತ್ರ ಸೆಮಿಫೈನಲ್ ಹಂತಕ್ಕೇರಿದರೆ ದೊಡ್ಡ ಸಾಧನೆ. ಒಂದೆರಡು ಆಟಗಾರರನ್ನು ಬಿಟ್ಟರೆ ಇನಿಂಗ್ಸ್ ಕಟ್ಟಬಲ್ಲ ಆಟಗಾರರು ವಿಶ್ವಕಪ್ ತಂಡದಲ್ಲಿಲ್ಲ. ಹೀಗಾಗಿ ಭಾರತ ಈ ಬಾರಿ ಕಪ್ ಗೆಲ್ಲುವುದು ಅಸಾಧ್ಯ ಎಂದು ಗಂಭಿರ್ ಹೇಳಿದ್ದರು.
ಯುವಿ ಪ್ರಕಾರವೂ ಭಾರತ ಕಪ್ ಗೆಲ್ಲಲ್ಲ
ಟಿ20 ಮತ್ತು ಏಕದಿನ ವಿಶ್ವಕಪ್ ಹೀರೊ, ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್(Yuvraj Singh) ಕೂಡ ಭಾರತ ಈ ಬಾರಿ ವಿಶ್ವಕಪ್ ಗೆಲ್ಲುವುದು ಅನುಮಾನ ಎಂದು ಹೇಳಿದ್ದರು. ಯುಟ್ಯೂಬ್ ವಾಹಿನಿಯ ‘ಕ್ರಿಕೆಟ್ ಬಾಸು’ ಚಾನಲ್‌ನಲ್ಲಿ ಮಾತನಾಡಿದ್ದ ಯುವರಾಜ್ ಸಿಂಗ್, “ಒಬ್ಬ ಅಪ್ಪಟ ದೇಶಪ್ರೇಮಿಯಾಗಿ ನಾನು ಕೂಡ ಭಾರತ ತಂಡ ಕಪ್ ಗೆಲ್ಲುವುದನ್ನು ನೋಡಲು ಬಯಸುತ್ತೇನೆ. ಆದರೆ ಭಾರತ ತಂಡ ಟ್ರೋಫಿ ಗೆದ್ದೇ ಗೆಲ್ಲುತ್ತದೆ ಎಂದು ಹೇಳಲು ಕಷ್ಟಕರ. ಏಕೆಂದರೆ ಭಾರತ ತಂಡದಲ್ಲಿ ಹಲವು ಸಮಸ್ಯೆಗಳು ಕಾಣುತ್ತಿದೆ, ಇದು ಪರಿಹಾರ ಕಾಣುವವರೆಗೆ ಕಪ್ ಗೆಲ್ಲುವುದು ಕಷ್ಟ” ಎಂದು ಹೇಳಿದ್ದರು. ಅಕ್ಷರ್ ಪಟೇಲ್ ಅವರ ಸ್ಥಾನಕ್ಕೆ ಅಶ್ವಿನ್ ಬದಲು ಯಜುವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿದರೆ ಉತ್ತಮವಾಗಿರುತ್ತಿತ್ತು ಎಂದು ಹೇಳಿದ್ದರು.