ಮೆಲ್ಬೋರ್ನ್: ವಿಶ್ವದ ಸ್ಟಾರ್ ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್(Novak Djokovic) ಅವರು ಮುಂದಿನ ವರ್ಷ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜೊಕೋಗೆ ಆಸ್ಟ್ರೇಲಿಯಾ ಸರ್ಕಾರದಿಂದ ವೀಸಾ ಲಭಿಸುವ ನಿರೀಕ್ಷೆಯಿದೆ ಎಂದು ಆಸ್ಟ್ರೇಲಿಯಾದ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
2022ರ ವರ್ಷಾರಂಭದ ಗ್ರ್ಯಾನ್ಸ್ಲಾಮ್ ಆಡಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಆಸ್ಟ್ರೇಲಿಯಾ ಪ್ರವೇಶಿಸಿದ್ದ ಜೊಕೋವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ರದ್ದು ಮಾಡಿತ್ತು. ಅಲ್ಲದೆ ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದಲೂ ಅವರನ್ನು ಕೈಬಿಡಲಾಗಿತ್ತು. ಜೊಕೋ ಅವರ ಈ ತಪ್ಪಿಗೆ ಆಸೀಸ್ ಸರ್ಕಾರ ಮೂರು ವರ್ಷಗಳ ಸಂಭಾವ್ಯ ಗಡಿಪಾರಿನ ಶಿಕ್ಷೆ ವಿಧಿಸಿತ್ತು.
ಇದೀಗ ಆಸ್ಟ್ರೇಲಿಯಾದಲ್ಲಿ ಹೊಸ ಸರ್ಕಾಋ ಅಧಿಕಾರಕ್ಕೆ ಬಂದ ಬಳಿಕ ಕೋವಿಡ್ ನಿಯಮವನ್ನು ರದ್ದುಗೊಳಿಸಿದೆ. ಈ ನಿಟ್ಟಿನಲ್ಲಿ ಇಮಿಗ್ರೇಷನ್ ಸಚಿವರು ಜೊಕೋವಿಕ್ ಅವರನ್ನು ಮೂರು ವರ್ಷ ದೇಶದಿಂದ ಹೊರಗಿಡುವ ಅವಧಿ ರದ್ದುಪಡಿಸಿದ್ದಾರೆ ಎಂದು ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ದೃಢಪಡಿಸಿದೆ. ಆದರೆ ಇಮಿಗ್ರೇಷನ್ ಸಚಿವ ಆ್ಯಂಡ್ರ್ಯೂ ಗೈಲ್ಸ್ ಅವರ ಕಚೇರಿಯು ಗೌಪ್ಯತೆಯ ಕಾರಣ ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದೆ. ವೀಸಾ ಸ್ಥಿತಿಗತಿಯ ಕುರಿತು ಏನಿದ್ದರೂ ಜೊಕೋವಿಕ್ ಅವರೇ ಅಧಿಕೃತ ಘೋಷಣೆ ಮಾಡಬೇಕಿದೆ. ಒಟ್ಟಾರೆ ಜೊಕೋವಿಕ್ಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲು ಇದ್ದಂತಹ ದೊಡ್ಡ ಸಮಸ್ಯೆಯೊಂದು ಪರಿಹಾರವಾಗುವ ಕಾಲ ಸನ್ನಿಹಿತವಾದಂತಿದೆ.
ಇದನ್ನೂ ಓದಿ | IND VS PAK | ಟ್ವೀಟ್ ಸಮರ ನಿಲ್ಲಿಸಿ; ವಾಸಿಂ ಅಕ್ರಂ ಖಡಕ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?