ಪ್ಯಾರಿಸ್: ಸರ್ಬಿಯಾದ ಪ್ರಸಿದ್ಧ ಟೆನ್ನಿಸ್ ಆಟಗಾರ, ವಿಶ್ವ ನಂ.1 ನೊವಾಕ್ ಜೊಕೊವಿಕ್(Novak Djokovic) ಅವರು ಬಲ ಮೊಣಕಾಲಿನ ಗಾಯದಿಂದಾಗಿ ಪ್ರಸಕ್ತ ಸಾಗುತ್ತಿರುವ ಫ್ರೆಂಚ್ ಓಪನ್(French Open 2024) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ತಮ ಅಲಭ್ಯವನ್ನು ಜೊಕೊವಿಕ್ ಮಂಗಳವಾರ ಖಚಿತಪಡಿಸಿದರು.
ಈ ಕೂಟದಲ್ಲಿ ಹಾಲಿ ಚಾಂಪಿಯನ್ ಆಗಿರುವ ಜೊಕೊವಿಕ್ ಐದು ಸೆಟ್‌ಗಳು ಮತ್ತು 4 1/2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಫ್ರಾನ್ಸಿಸ್ಕೊ ಸೆರುಂಡೊಲೊ ವಿರುದ್ಧದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಗಾಯಗೊಂಡಿದ್ದರು. ಗಾಯದ ನಡುವೆಯೂ ಅವರು ತೀವ್ರ ಹೋರಾಟ ನಡೆಸಿ ಗೆಲುವು ಸಾಧಿಸಿದ್ದರು. ಪಂದ್ಯದ ಬಳಿಕ MRI ಪರೀಕ್ಷೆಗೆ ಒಳಪಟ್ಟಿದ್ದ ವೇಳೆ ಗಾಯದ ತೀವ್ರತೆ ಅರಿವಿಗೆ ಬಂದಿದೆ. ಅಂತಿಮವಾಗಿ ವೈದ್ಯರ ಸೂಚನೆ ಮೇರೆಗೆ ಟೂರ್ನಿಯಿಂದ ಹೊರ ನಡೆದಿದ್ದಾರೆ.
24 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಜೋಕೊ ಎರಡು ಬಾರಿ ಫ್ರೆಂಚ್ ಓಪನ್ ರನ್ನರ್ ಅಪ್ ಕ್ಯಾಸ್ಪರ್ ರೂಡ್ ವಿರುದ್ಧ ಬುಧವಾರ ಕ್ವಾರ್ಟರ್ ಫೈನಲ್‌ನಲ್ಲಿ ಕಣಕ್ಕಿಳಿಬೇಕಿತ್ತು. ಇದೀಗ ಜೋಕೊ ಹಿಂದೆ ಸರಿದ ಕಾರಣ ರೂಡ್ ವಾಕ್ ಓವರ್ ಪಡೆದು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ನಂ. 4 ಅಲೆಕ್ಸಾಂಡರ್ ಜ್ವೆರೆವ್ ಅಥವಾ ನಂ. 11 ಅಲೆಕ್ಸ್ ಡಿ ಮಿನೌರ್ ನಡುವಿನ ವಿಜೇತರನ್ನು ಎದುರಿಸಲಿದ್ದಾರೆ. 37 ವರ್ಷದ ಜೊಕೊವಿಕ್ ಈ ವರ್ಷವೂ ಕೂಟ ಚಾಂಪಿಯನ್ ಪಟ್ಟ ಅಲಂಕರಿಸಿ ಪ್ರಶಸ್ತಿಯನ್ನು ಉಳಿಸುವ ಯೋಜನೆಯಲ್ಲಿದ್ದರು. ಆದರೆ ಅವರ ಈ ಕನಸಿಗೆ ಗಾಯ ಅಡ್ಡಗಾಲಿಕ್ಕಿತು.
ಇದನ್ನೂ ಓದಿ Australian Open 2024: ಫೆಡರರ್ ದಾಖಲೆ ಸರಿಗಟ್ಟಿದ ನೊವಾಕ್ ಜೊಕೊವಿಕ್
ಗಾಫ್-ಸ್ವಿಯಾಟೆಕ್ ಸೆಮಿ ಪ್ರವೇಶ
ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಮತ್ತು ಅಮೆರಿಕದ ಕೊಕೊ ಗಾಫ್ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಸೆಮಿ ಫೈನಲ್‌ನಲ್ಲಿ ಉಭಯ ಆಟಗಾರ್ತಿಯರು ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯ ಜೂನ್ 6, ಗುರುವಾರದಂದು ನಡೆಯಲಿದೆ.
ಇಂದು(ಮಂಗಳವಾರ) ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸ್ವಿಯಾಟೆಕ್ ಅವರು ವಿಂಬಲ್ಡನ್ ಚಾಂಪಿಯನ್ ಮಾರ್ಕೆಟಾ ವೊಂಡ್ರೊಸೊವಾ ಅವರನ್ನು 6-0, 6-2 ನೇರ ಸೆಟ್‌ಗಳಿಂದ ಸೋಲಿಸಿದರು. ದಿನ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಅಮೆರಿಕದ ಕೊಕೊ ಗಾಫ್ ಅವರು ಓನ್ಸ್ ಜಬೇರ್ ವಿರುದ್ಧ ಮೂರು ಸುತ್ತುಗಳ ಮ್ಯಾರಥಾನ್ ಹೋರಾಟದಲ್ಲಿ 4-6 6-2 6-3 ಅಂತರದಿಂದ ಗೆದ್ದು ಬೀಗಿದರು.