ಚೆನ್ನೈ: ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ ನೀರು ಕುಡಿಸಿದ ಅಪಾಯಕಾರಿ ಆಫ್ಘನ್ ಮತ್ತು ಬಲಿಷ್ಠ ನ್ಯೂಜಿಲ್ಯಾಂಡ್(New Zealand vs Afghanistan) ತಂಡಗಳು ಬುಧವಾರ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಸತತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿರುವ ಕಿವೀಸ್ ತಂಡದ ಗೆಲುವಿನ ಓಟಕ್ಕೆ ಆಫ್ಘನ್ ಬ್ರೇಕ್ ಹಾಕೀತೇ ಎಂಬುದು ಪಂದ್ಯದ ಕೌತುಕ.
ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಮೂರು ವಿಭಾಗದಲ್ಲಿಯೂ ಅತ್ಯಂತ ಬಲಿಷ್ಠವಾಗಿದೆ. ಇಲ್ಲಿ ಗೆಲುವಿಗೆ ನಿರ್ದಿಷ್ಟ ಆಟಗಾರನ ಪ್ರದರ್ಶನವನ್ನು ನಂಬಿ ಕೂರಬೇಕಿಲ್ಲ. ಆಡುವ 11 ಮಂದಿಯೂ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಂಡಕ್ಕೆ ನೆರವಾಗಬಲ್ಲರು. ಇದು ತಂಡದ ಪ್ಲಸ್ ಪಾಯಿಂಟ್. ಆರಂಭಿಕ ಆಟಗಾರ ಡೆವೋನ್ ಕಾನ್ವೆ, ರಚೀನ್ ರವೀಂದ್ರ, ವಿಲ್ ಯಂಗ್, ಟಾಮ್ ಲ್ಯಾಥಮ್, ಡೇರಿಯಲ್ ಮಿಚೆಲ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಬೌಲಿಂಗ್ನಲ್ಲಿ ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್ ಮತ್ತು ಲಾಕಿ ಫರ್ಗ್ಯುಸನ್ ಇವರೆಲ್ಲ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ವಿಲಿಯಮ್ಸನ್ ಅಲಭ್ಯ
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಕೇನ್ ವಿಲಿಯಮ್ಸನ್ ಅವರು ಈ ಪಂದ್ಯ ಸೇರಿ ಉಳಿದಿರುವ ಎಲ್ಲ ಲೀಗ್ ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸದು. ಏಕೆಂದರೆ ಇಲ್ಲಿ ಒಬ್ಬರಿಗಿಂತ ಒಬ್ಬರು ಬಲಿಷ್ಠ ಆಟಗಾರರಿದ್ದಾರೆ. 11 ಮಂದಿಯ ಆಯ್ಕೇ ಜಟಿಲವಾಗಿದೆ. ಎಲ್ಲರು ಉತ್ತಮ ಪ್ರದರ್ಶನವನ್ನೇ ತೋರುತ್ತಿದ್ದಾರೆ. ಕೇನ್ ಅನುಪಸ್ಥಿತಿಯಲ್ಲಿ ಟಾಮ್ ಲ್ಯಾಥಮ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಅಪಾಯಕಾರಿ ಆಫ್ಘನ್
ಇಂಗ್ಲೆಂಡ್ ತಂಡವನ್ನು ಮಗುಚಿ ಹಾಕಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಅಫಘಾನಿಸ್ತಾನ ತಂಡ ಈ ಪಂದದಲ್ಲಿಯೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ಅಲ್ಲದೆ ಇದು ಸ್ಪಿನ್ ಪಿಚ್ ಆಗಿರುವ ಕಾರಣ ತ್ರಿವಳಿ ಸ್ಪಿನ್ನರ್ಗಳನ್ನು ನೆಚ್ಚಿಕೊಂಡಿರುವ ಆಫ್ಘನ್ಗೆ ಗೆಲುವಿನ ಅವಕಾಶ ಹೆಚ್ಚು ಎನ್ನಲಡ್ಡಿಯಿಲ್ಲ. ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಮೊಹಮ್ಮದ್ ನಬಿ ಸ್ಪಿನ್ ಬೌಲರ್ಗಳು. ಸ್ವಿಂಗ್ ಬೌಲರ್ ನವೀನ್ ಉಲ್ ಹಕ್ ಕೂಡ ಘಾತಕ ಸ್ಫೆಲ್ ನಡೆಸಬಲ್ಲರು. ಬ್ಯಾಟಿಂಗ್ ಕೂಡ ಉತ್ತಮವಾಗಿದೆ. 21 ವರ್ಷದ ಯುವ ಆಟಗಾರ ರೆಹಮಾನುಲ್ಲ ಗುರ್ಬಜ್ ಮತ್ತು ಇಬ್ರಾಹಿಂ ಜದ್ರಾನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಉತ್ತಮ ಆರಂಭ ಒದಗಿಸಬಲ್ಲರು.
ಇದನ್ನೂ ಓದಿ Team India: ಭಾರತವನ್ನು ಸೋಲಿಸುವುದು ಕಷ್ಟ ಎಂದ ಆಸೀಸ್ ಮಾಜಿ ಕ್ಯಾಪ್ಟನ್
ಪಿಚ್ ರಿಪೋರ್ಟ್
ಚೆನ್ನೈಯ ಐಕಾನಿಕ್ ಎಂ.ಎ ಚಿದಂಬರಂ ಸ್ಟೇಡಿಯಂನ ಪಿಚ್ ಸಂಪೂರ್ಣ ಸ್ಪಿನ್ ಪಿಚ್ ಆಗಿದೆ. ಸ್ಪಿನ್ನರ್‌ಗಳು ಆಟದ ಉದ್ದಕ್ಕೂ ಯೋಗ್ಯವಾದ ತಿರುವು ಪಡೆಯಲಿದ್ದಾರೆ. ಇಲ್ಲಿನ ಮೊದಲ ಇನಿಂಗ್ಸ್ನ ಎವರೇಜ್ ರನ್ 247. ಹೀಗಾಗಿ ಈ ಪಂದ್ಯವೂ ಸಣ್ಣ ಮೊತ್ತದ ಮೇಲಾಟವಾಗುವ ಸಾಧ್ಯತೆ ಇದೆ.
ಹವಾಮಾನ ವರದಿ
ಚೆನ್ನೈಯಲ್ಲಿ ಮಧ್ಯಾಹ್ನದ ತಾಪಮಾನವು ಸುಮಾರು 33 ಡಿಗ್ರಿಗಳಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆಯ ವೇಳೆ ಸ್ವಲ್ಪ ಮೋಡ ಕವಿದ ವಾತಾವರಣವಿದ್ದರೂ ತಾಪ ಅಧಿಕವಾಗಿಯೇ ಇರಲಿದೆ. ಮಳೆಯ ಯಾವುದೇ ಸಾಧ್ಯತೆ ಇಲ್ಲ ಆದರೆ, ಇಬ್ಬನಿ ಸಮಸ್ಯೆ ಖಚಿತ ಎಂದು ತಿಳಿಸಿದೆ.
ಸಂಭಾವ್ಯ ತಂಡ
ಅಫಘಾನಿಸ್ತಾನ: ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.
ನ್ಯೂಜಿಲ್ಯಾಂಡ್: ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗ್ಯುಸನ್, ಟ್ರೆಂಟ್ ಬೌಲ್ಟ್.