Site icon Vistara News

Kane Williamson: ಶತಕ ಬಾರಿಸಿ ವಿಶ್ವ ದಾಖಲೆ ಬರೆದ ಕೇನ್​ ವಿಲಿಯಮ್ಸನ್

Kane Williamson got to his 32nd Test century in 203 balls

ಹ್ಯಾಮಿಲ್ಟನ್‌ (ನ್ಯೂಜಿಲ್ಯಾಂಡ್​): ಟೆಸ್ಟ್​ ಕ್ರಿಕೆಟ್​ನಲ್ಲಿ ಸತತವಾಗಿ ಶತಕ ಬಾರಿಸುತ್ತಿರುವ ನ್ಯೂಜಿಲ್ಯಾಂಡ್​ ತಂಡದ ಮಾಜಿ ನಾಯಕ ಕೇನ್​ ವಿಲಿಯಮ್ಸನ್​(Kane Williamson) ಅವರು ದಾಖಲೆಯೊಂದನ್ನು ಬರೆದಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ(NZ vs SA) ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ(New Zealand vs South Africa 2nd Test) ಶತಕ ಬಾರಿಸುವ ಮೂಲಕ ವಿಲಿಯಮ್ಸನ್ 32ನೇ ಟೆಸ್ಟ್ ಶತಕ ಪೂರ್ತಿಗೊಳಿಸಿದರು. ಈ ಮೂಲಕ ಅತಿ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ದಕ್ಷಿಣ ಆಫ್ರಿಕಾ ನೀಡಿದ 267 ರನ್‌ ಗೆಲುವಿನ ಗುರಿ ಬೆನ್ನಟ್ಟುವ ವೇಳೆ ಸೊಗಸಾದ ಬ್ಯಾಟಿಂಗ್​ ನಡೆಸಿದ ಕೇನ್​ ವಿಲಿಯಮ್ಸನ್ 12 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 133 ರನ್​ ಬಾರಿಸಿದರು. ಇವರ ಈ ಬ್ಯಾಟಿಂಗ್​ ನೆರವಿನಿಂದ ನ್ಯೂಜಿಲ್ಯಾಂಡ್​ ತಂಡ ಈ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಸರಣಿ ಗೆಲುವು ದಾಖಲಿಸಿದೆ.

ವಿಶ್ವದ ನಂಬರ್ 1 ಟೆಸ್ಟ್ ಬ್ಯಾಟರ್ ಕೇನ್​ ವಿಲಿಯಮ್ಸನ್​ ಕಳೆದ ಏಳು ಟೆಸ್ಟ್‌ಗಳಲ್ಲಿ ಏಳು ಶತಕಗಳನ್ನು ಗಳಿಸಿದ್ದಾರೆ. ಮೌಂಟ್ ಮೌಂಗನುಯಿಯಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ, 33 ವರ್ಷದ ವಿಲಿಯಮ್ಸನ್ ಎರಡೂ ಇನ್ನಿಂಗ್ಸ್‌ಗಳಲ್ಲಿ (118 ಮತ್ತು 109) ಶತಕಗಳನ್ನು ಬಾರಿಸಿದ್ದರು. ಇದೀಗ ದ್ವಿತೀಯ ಟೆಸ್ಟ್​ನಲ್ಲಿಯೂ ಶತಕ ಬಾರಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಕೂಡ 32 ಟೆಸ್ಟ್ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಕ್ ಟು ಬ್ಯಾಕ್​ ದಾಖಲೆ ಬರೆಯುತ್ತಿರುವ ಸವ್ಯಸಾಚಿ ಕ್ರಿಕೆಟಿಗ ​ ವಿಲಿಯಮ್ಸನ್

ಅತಿ ಕಡಿಮೆ ಇನಿಂಗ್ಸ್​ನಲ್ಲಿ 32 ಶತಕ ಪೂರ್ತಿಗೊಳಿಸಿದ ಬ್ಯಾಟರ್​ಗಳು

ಆಟಗಾರದೇಶಇನಿಂಗ್ಸ್​
ಕೇನ್​ ವಿಲಿಯಮ್ಸನ್​ನ್ಯೂಜಿಲ್ಯಾಂಡ್​172
ಸ್ಟೀವನ್​ ಸ್ಮಿತ್​ಆಸ್ಟ್ರೇಲಿಯಾ174
ರಿಕಿ ಪಾಂಟಿಂಗ್​ಆಸ್ಟ್ರೇಲಿಯಾ176
ಸಚಿನ್​ ತೆಂಡೂಲ್ಕರ್​ಭಾರತ179
ಯೂನಿಸ್​ ಖಾನ್​ಪಾಕಿಸ್ತಾನ193

ಗರಿಷ್ಠ ಟೆಸ್ಟ್ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೇನ್​ ವಿಲಿಯಮ್ಸನ್​ 13ನೇ ಸ್ಥಾನದಲ್ಲಿದದ್ದಾರೆ. 51 ಟೆಸ್ಟ್ ಶತಕ ಬಾರಿಸಿರುವ ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್​ ಕಾಲೀಸ್ 45, ಆಸ್ಟ್ರೇಲಿಯದ ರಿಕಿ ಪಾಂಟಿಂಗ್ 41 ಶತಕಗಳನ್ನು ಬಾರಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ.  ಪ್ರಸಕ್ತ ಸಾಲಿನ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಈ ಹಿಂದೆ ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​ ಹೆಸರಿನಲ್ಲಿತ್ತು. ಇದೀಗ ವಿಲಿಯಮ್ಸನ್​ ಮತ್ತೊಂದು ಶತಕ ಬಾರಿಸುವ ಮೂಲಕ 32* ಶತಕ ಪೂರ್ತಿಗೊಳಿಸಿದ್ದಾರೆ. ಹೀಗಾಗಿ ಉಭಯ ಆಟಗಾರರು ಜಂಟಿ ದಾಖಲೆ ಹೊಂದಿದ್ದಾರೆ.

Exit mobile version