ಇಂದೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ(IND vs AUS 2nd ODI) ಪಂದ್ಯದಲ್ಲಿ ಸಿಕ್ಸರ್ಗಳ ಮಳೆಯನ್ನೇ ಸುರಿಸಿದ ಟೀಮ್ ಇಂಡಿಯಾ(team india) ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ವಿಶ್ವ ದಾಖಲೆಯೊಂದನ್ನು(World Record) ತನ್ನ ಹೆಸರಿಗೆ ಬರೆದಿದೆ. ಏಕದಿನ(ODI Cricket) ಕ್ರಿಕೆಟ್ನಲ್ಲಿ ಮೂರು ಸಾವಿರ ಸಿಕ್ಸರ್ ಪೂರ್ತಿಗೊಳಿಸಿದ ವಿಶ್ವದ ಮೊದಲ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ.
ಇಂದೋರ್ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ತಂಡ ಒಟ್ಟು 18 ಸಿಕ್ಸರ್ಗಳನ್ನು ಬಾರಿಸಿತ್ತು. ಇದೇ ವೇಳೆ 3000* ಸಿಕ್ಸರ್ ಪೂರ್ತಿಗೊಳಿಸಿದ ದಾಖಲೆ ನಿರ್ಮಾಣಗೊಂಡಿತು. ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ನಡಿದಿದ್ದ ಆಸೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 19 ಸಿಕ್ಸರ್ ಬಾರಿಸಿತ್ತು. ಇದು ತಂಡವೊಂದರ ಎದುರು ಭಾರತ ಬಾರಿಸಿದ ಗರಿಷ್ಠ ಸಂಖ್ಯೆಯ ಸಿಕ್ಸರ್ ಆಗಿದೆ.
ವಿಂಡೀಸ್ಗೆ ದ್ವಿತೀಯ ಸ್ಥಾನ
ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ಗೆ ದ್ವಿತೀಯ ಸ್ಥಾನ. ವಿಂಡೀಸ್ 2953* ಸಿಕ್ಸರ್ ಬಾರಿಸಿದೆ. ಆ ಬಳಿಕದ ಅಂದರೆ ಮೂರನೇ ಸ್ಥಾನದಲ್ಲಿ ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಂಡ ಕಾಣಿಸಿಕೊಂಡಿದೆ. ಪಾಕ್ 2566* ಸಿಕ್ಸರ್ ಸಿಡಿಸಿದೆ. ಅಚ್ಚರಿ ಎಂದರೆ 5 ಬಾರಿ ವಿಶ್ವ ಚಾಂಪಿಯನ್ ಆಸೀಸ್ ತಂಡ ಕೆಳ ಕ್ರಮಾಂಕದಲ್ಲಿದೆ.
ಸರಣಿ ಗೆದ್ದ ಭಾರತ
ಭಾರತ ತಂಡ ಡಕ್ವರ್ತ್ ನಿಯಮದ ಅನ್ವಯ 99 ರನ್ಗಳ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ಶ್ರೇಯಸ್ ಅಯ್ಯರ್(105) ಮತ್ತು ಶುಭಮನ್ ಗಿಲ್(104) ಅವರ ಆಕರ್ಷಕ ಶತಕ, ಆ ಬಳಿಕ ನಾಯಕ ಕೆ.ಎಲ್ ರಾಹುಲ್(52) ಹಾಗೂ ಸೂರ್ಯಕುಮಾರ್ ಯಾದವ್(72*) ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಪೇರಿಸಿ ಸವಾಲೊಡ್ಡಿತು. ಆಸೀಸ್ ಬೃಹತ್ ಮೊತ್ತವನ್ನು ಬೆನ್ನಟ್ಟುವ ವೇಳೆ ಪಂದ್ಯಕ್ಕೆ ಮಳೆಯಿಂದ ಹಲವು ಬಾರಿ ಅಡಚಣೆಯಾಗಿತು. ಹೀಗಾಗಿ ಡಕ್ವರ್ತ್-ಲೂಯಿಸ್ ನಿಯಮವನ್ನು ಜಾರಿಗೆ ತರಲಾಯಿತು. ಅದರಂತೆ ಈ ನಿಯಮದನ್ವಯ ಆಸೀಸ್ ತಂಡಕ್ಕೆ 33 ಓವರ್ಗಳಲ್ಲಿ 317 ರನ್ಗಳ ಗುರಿ ನೀಡಲಾಯಿತು. ಆದರೆ ಆಸೀಸ್ 28.2 ಓವರ್ಗಳಲ್ಲಿ 217 ರನ್ಗಳಿಗೆ ಸರ್ವ ಪತನ ಕಂಡು ಹೀನಾಯ ಸೋಲು ಅನುಭವಿಸಿತು.
ಇದನ್ನೂ ಓದಿ IND vs AUS: ಸೂರ್ಯಕುಮಾರ್ ತೂಫಾನ್ ಬ್ಯಾಟಿಂಗ್ಗೆ ವಿರಾಟ್ ಕೊಹ್ಲಿ ದಾಖಲೆ ಉಡೀಸ್
ಭಾರತ ತಂಡ ನಿರ್ಮಿಸಿದ ಇತರ ದಾಖಲೆಗಳ ಪಟ್ಟಿ ಇಲ್ಲಿದೆ
3 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆಲುವು
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಕೊನೆಯದಾಗಿ ತವರಿನಲ್ಲಿ ಏಕದಿನ ಸರಣಿ ಗೆದ್ದದ್ದು 2020ರಲ್ಲಿ. ಅದು ಮೂರು ಪಂದ್ಯಗಳ ಸರಣಿಯಾಗಿತ್ತು. ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು. ಇದೀಗ 3 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಗೆದ್ದ ಸಾಧನೆ ಮಾಡಿದೆ. ಸದ್ಯ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದ್ದು ಅಂತಿಮ ಪಂದ್ಯ ಬುಧವಾರ ರಾಜ್ಕೋಟ್ನಲ್ಲಿ ನಡೆಯಲಿದೆ. ಇದನ್ನೂ ಗೆದ್ದರೆ ಕ್ಲೀನ್ಸ್ವೀಪ್ ಸಾಧನೆ ಮಾಡಲಿದೆ.
7 ಸರಣಿ ಗೆಲುವು
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿ ತವರಿನಲ್ಲಿ ಸರಣಿ ಜಯಿಸಿದ್ದು 1986ರಲ್ಲಿ ಇಲ್ಲಿ ಭಾರತ 3-2 ಅಂತರದಿಂದ ಗೆದ್ದು ಬೀಗಿತ್ತು. ಒಂದು ಪಂದ್ಯ ರದ್ದುಗೊಂಡಿತ್ತು. ಒಟ್ಟಾರೆ ಭಾರತ ಆಸೀಸ್ ವಿರುದ್ಧ ತವರಿನಲ್ಲಿ 7 ಬಾರಿ ಸರಣಿ ಜಯಿಸಿದ ಸಾಧನೆ ಮಾಡಿದೆ.