ಬೆಂಗಳೂರು: ಮುಂದಿನ ವರ್ಷ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಅಮೆರಿಕಾ ಮತ್ತು ವಿಂಡೀಸ್ ಆತಿಥ್ಯದಲ್ಲಿ ನಡೆಯಲಿದೆ. ಈಗ ತಾನೆ ಕ್ರಿಕೆಟ್ ಲೋಕಕ್ಕೆ ಅಂಬೆಗಾಲಿಡುತ್ತಿರುವ ಅಮೆರಿಕ ಕ್ರಿಕೆಟ್ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಅಂಡರ್-19 ತಂಡ(USA Under-19 Team) ಏಕದಿನ ಕ್ರಿಕೆಟ್ ಪಂದ್ಯವೊಂದರಲ್ಲಿ(ODI World Record) ದಾಖಲೆಯ ಮೊತ್ತವನ್ನು ಪೇರಿಸಿದ ಸಾಧನೆ ಮಾಡಿದೆ.
ಟೊರೊಂಟೊ ಕ್ರಿಕೆಟ್ ಕ್ಲಬ್‌ನಲ್ಲಿ ನಡೆದ ಐಸಿಸಿ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಅಮೆರಿಕಾಸ್ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೆರಿಕ ತಂಡ ಬರೋಬ್ಬರಿ 515 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅರ್ಜೆಂಟೀನಾ U-19 ತಂಡದ(Argentina Under-19 Team) ವಿರುದ್ಧ ಯುಎಸ್ಎ ಅಂಡರ್ 19 ತಂಡ ಈ ದಾಖಲೆಯ ಮೊತ್ತವನ್ನು ಪೇರಿಸಿತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಮೆರಿಕ ತಂಡ ಪ್ರಣವ್ ಚೆಟ್ಟಿಪಾಳ್ಯಂ ಹಾಗೂ ಭವ್ಯ ಮೆಹ್ತಾ ಅವರ ಸ್ಫೋಟಕ ಆಟದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಬರೋಬ್ಬರಿ 515 ರನ್ ಕಲೆಹಾಕಿತು.
ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ಎದುರಾಳಿ ಅರ್ಜೆಂಟೀನಾ 19.5 ಓವರ್ಗಳಲ್ಲಿ ಕೇವಲ 65 ರನ್ಗಳಿಗೆ ಆಲೌಟ್ ಆಯಿತು. ಅಮೆರಿಕ 450 ರನ್ಗಳ ಅಮೋಘ ಗೆಲುವು ದಾಖಲಿಸಿತು. ಕರಾರುವಾಕ್ ದಾಳಿ ನಡೆಸಿದ ಆರಿನ್ ನಾಡಕರ್ಣಿ 6 ಓವರ್ಗಳಲ್ಲಿ ಕೇವಲ 21 ರನ್ ನೀಡಿ 6 ವಿಕೆಟ್ ಉರುಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ರಿಷಿ ರಮೇಶ್ ಶತಕ
43 ಎಸೆತಗಳನ್ನು ಎದುರಿಸಿದ ಪ್ರಣವ್ 10 ಬೌಂಡರಿ ಬಾರಿಸಿ 61 ರನ್ಗಳಿಸಿದರು. ಭವ್ಯ ಮೆಹ್ತಾ 91 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 14 ಬೌಂಡರಿ ನೆರೆವಿನಿಂದ 136 ರನ್ ಬಾರಿಸಿ ರನೌಟ್ ಆದರು. ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ರಿಷಿ ರಮೇಶ್ 59 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 13 ಬೌಂಡರಿಗಳೊಂದಿಗೆ ಭರ್ಜರಿ ಶತಕ ಸಿಡಿಸಿದರು. ಹಾಗೆಯೇ ಅರ್ಜುನ್ ಮಹೇಶ್ 67 ರನ್, ಅರೆಪಲ್ಲಿ 48 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಉತ್ಕರ್ಷ್ ಶ್ರೀವಾಸ್ತವ 22 ಎಸೆತಗಳಲ್ಲಿ 40 ರನ್ ಚಚ್ಚಿ ತಂಡದ ಬೃಹತ್ ಮೊತ್ತಕ್ಕೆ ಸಹಕಾರಿಯಾದರು.
A quite incredible day in Toronto for our U19 Men's team today.
— USA Cricket (@usacricket) August 15, 2023
– Total of 515/8
– Victory by 450 runs
– 2 individual centuries
– 211 run partnership
– Individual 6 wicket haul
Well done to the whole squad and the support staff.
Photos: ICC/Peter Della Penna pic.twitter.com/idsgteEhsE
ಇಂಗ್ಲೆಂಡ್ ದಾಖಲೆ ಪತನ
ಈ ಪಂದ್ಯದಲ್ಲಿ 515 ರನ್ ಬಾರಿಸುವ ಮೂಲಕ ಯುಎಸ್ಎ ಅಂಡರ್-19 ತಂಡ ಐಸಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿತು. ಇದಕ್ಕೂ ಮುನ್ನ ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ತಂಡ ಗರಿಷ್ಠ ಮೊತ್ತ ಪೇರಿಸಿದ ದಾಖಲೆ ನಿರ್ಮಿಸಿತ್ತು. 2022 ರಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್(England vs Netherland) ವಿರುದ್ಧ 498/4 ರನ್ ಬಾರಿಸಿತ್ತು. ಇದೀಗ ಯುಎಸ್ಎ ಕಿರಿಯರ ತಂಡ 515 ರನ್ ಬಾರಿಸಿ ಹೊಸ ಇತಿಹಾಸ ಬರೆದಿದೆ.