Site icon Vistara News

Team India | ಕೋಚ್‌ ದ್ರಾವಿಡ್‌ ದಾಖಲೆ ಮುರಿಯಲು ಕೊಹ್ಲಿಗಿದೆ ಚಾನ್ಸ್‌; ಆಸಿಸ್‌ ವಿರುದ್ಧ ಸರಣಿಯಲ್ಲಿ ಸಾಧ್ಯವೇ?

virat kohli

ಮೊಹಾಲಿ : ಭಾರತ ತಂಡದ (Team India) ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಅಭಿಮಾನಿಗಳಿಗೆ ಅತ್ಯಂತ ಖುಷಿಯ ವಿಚಾರವಾಗಿದೆ. ಏಷ್ಯಾ ಕಪ್‌ನಲ್ಲಿ ದಾಖಲೆಯ ಶತಕದ ಜತೆ ಅವರು ಬಾರಿಸಿದ ಒಟ್ಟಾರೆ ೨೭೬ ರನ್‌ಗಳು ಅವರ ವೃತ್ತಿ ಕ್ರಿಕೆಟ್‌ನ ಪುನರ್ಜನ್ಮ ಎಂದೇ ಹೇಳಲಾಗುತ್ತಿದೆ. ಈ ರೀತಿಯಾಗಿ ಪ್ರದರ್ಶನದ ಉತ್ತುಂಗದಲ್ಲಿರುವ ವಿರಾಟ್‌ ಕೊಹ್ಲಿಗೆ ಸೆಪ್ಟೆಂಬರ್‌ ೨೦ರಂದು ಆರಂಭವಾಗಲಿರುವ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ತಮ್ಮ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಹೆಸರಿನಲ್ಲಿರುವ ದಾಖಲೆಯೊಂದನ್ನು ಮುರಿಯುವ ಅವಕಾಶ ಇದೆ. ಆದರೆ, ಅಷ್ಟು ಸುಲಭವಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಭಾರತ ತಂಡದ ಮಾಜಿ ಮಧ್ಯಮ ಕ್ರಮಾಂಕದ ಬ್ಯಾಟರ್‌ ರಾಹುಲ್‌ ದ್ರಾವಿಡ್‌ ಅವರ ಭಾರತ ತಂಡದ ಪರ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಬಾರಿಸಿದವರು. ಅವರು 605 ಇನಿಂಗ್ಸ್‌ಗಳಲ್ಲಿ 24,208 ರನ್‌ ಬಾರಿಸಿದ್ದಾರೆ. 45.41 ಸರಾಸರಿಯಂತೆ ರನ್‌ ಬಾರಿಸಿರುವ ಅವರು ೪೮ ಶತಕ ಹಾಗೂ ೧೪೬ ಅರ್ಧ ಶತಕಗಳನ್ನು ಬಾರಿಸಿದ್ದಾರೆ.

೩೩ ವರ್ಷದ ವಿರಾಟ್‌ ಕೊಹ್ಲಿ ಇವರ ದಾಖಲೆಯನ್ನು ಮೀರುವ ಹಂತಕ್ಕೆ ಬಂದಿದ್ದಾರೆ. ಅದು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಸಾಧ್ಯವೇ ಎಂಬುದು ಕೌತುಕದ ವಿಷಯ. ಅವರು ದ್ರಾವಿಡ್‌ ಅವರಿಗಿಂತ 207 ರನ್‌ಗಳಷ್ಟು ಹಿಂದಿದ್ದಾರೆ. ಮೂರು ಟಿ೨೦ ಪಂದ್ಯದಲ್ಲಿ ಅಷ್ಟೊಂದು ರನ್‌ ಬಾರಿಸುವುದು ಸುಲಭವಲ್ಲ. ಆದರೆ, ಅವರ ಫಾರ್ಮ್‌ ಗಮನಿಸಿದರೆ ಕಷ್ಟವೂ ಅಲ್ಲ.

ಕೊಹ್ಲಿ ಈಗ ೪೬೮ ಪಂದ್ಯಗಳ 522 ಇನಿಂಗ್ಸ್‌ಗಳಲ್ಲಿ 53.81 ಸರಾಸರಿಯಂತೆ 24,002 ರನ್‌ ಬಾರಿಸಿದ್ದಾರೆ. ಒಂದು ವೇಳೆ ಆಸೀಸ್‌ ಸರಣಿಯಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿದರೆ ಹೊಸ ದಾಖಲೆ ತಮ್ಮೆಸರಿಗೆ ಬರೆದುಕೊಳ್ಳಲಿದ್ದಾರೆ.

ಇದನ್ನೂ ಓದಿ | ವ್ಯಕ್ತಿ ಪೂಜೆ ಸರಿಯಲ್ಲ, ವಿರಾಟ್‌ ಕೊಹ್ಲಿಯನ್ನು ಮತ್ತೊಮ್ಮೆ ಟಾರ್ಗೆಟ್‌ ಮಾಡಿದ ಗೌತಮ್‌ ಗಂಭೀರ್‌

Exit mobile version