Site icon Vistara News

Ollie Pope: ಅಲೆಸ್ಟರ್ ಕುಕ್ ದಾಖಲೆ ಮುರಿದ ಓಲಿ ಪೋಪ್

Ollie Pope scored plenty of runs behind the wicket

ಹೈದರಾಬಾದ್​: ಭಾರತ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಸೊಗಸಾದ ಬ್ಯಾಟಿಂಗ್​ ನಡೆಸಿ 196 ರನ್​ ಬಾರಿಸಿದ ಇಂಗ್ಲೆಂಡ್​ ತಂಡದ ಬ್ಯಾಟರ್​ ಓಲಿ ಪೋಪ್​ ಅವರು ದಾಖಲೆಯೊಂದನ್ನು ಬರೆದಿದ್ದಾರೆ. 12 ವರ್ಷಗಳ ಹಿಂದಿನ ತನ್ನದೇ ತಂಡದ ಮಾಜಿ ಆಟಗಾರ ಅಲೆಸ್ಟರ್ ಕುಕ್ ದಾಖಲೆಯನ್ನು ಮುರಿದಿದ್ದಾರೆ.

ಹೈದರಾಬಾದ್​ನ ರಾಜೀವಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ನಾಲ್ಕನೇ ದಿನ 148 ರನ್​ಗಳಿಂದ ಬ್ಯಾಟಿಂಗ್​ ಮುಂದುವರಿಸಿದ್ದ ಪೋಪ್​ ​48 ರನ್​ ಒಟ್ಟುಗೂಡಿಸಿ 196 ರನ್​ಗೆ ಔಟಾದರು. ಕೇವಲ 4 ರನ್​ ಹಿನ್ನಡೆಯಿಂದ ದ್ವಿಶತಕ ಬಾರಿಸುವ ಅವಕಾಶವನ್ನು ಕಳೆದುಕೊಂಡರು. ಜಸ್​ಪ್ರೀತ್​ ಬುಮ್ರಾ ಅವರ ಎಸೆತವನ್ನು ರಿವರ್ಸ್​ ಸ್ವೀಪ್​ ಮಾಡುವ ಪ್ರಯತ್ನದಲ್ಲಿ ಎಡವಿ ಕ್ಲೀನ್​ ಬೌಲ್ಡ್​ ಆದರು.

196 ರನ್ ಗಳಿಸಿದ ಪೋಪ್​ ಅವರು ಆತಿಥೇಯ ಭಾರತ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ವೈಯಕ್ತಿಕ ರನ್ ಬಾರಿಸಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜತೆಗೆ ಅಲೆಸ್ಟರ್ ಕುಕ್ ದಾಖಲೆಯನ್ನು ಹಿಂದಿಕ್ಕಿ ಭಾರತ ಎದುರು ಅತ್ಯಧಿಕ ವೈಯುಕ್ತಿಕ ಟೆಸ್ಟ್​ ರನ್​ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. ಅಲೆಸ್ಟರ್ ಕುಕ್ 2012 ರಲ್ಲಿ ಅಹಮದಾಬಾದ್​ನಲ್ಲಿ ನಡೆದಿದ್ದ ಟೆಸ್ಟ್​ನಲ್ಲಿ 176 ರನ್ ಬಾರಿಸಿದ್ದರು.

ಇದನ್ನೂ ಓದಿ AUS vs WI: ತವರಿನಲ್ಲೇ ಆಸೀಸ್​ ಸೊಕ್ಕಡಗಿಸಿದ ವಿಂಡೀಸ್​​; 27 ವರ್ಷಗಳ ಬಳಿಕ ಐತಿಹಾಸಿಕ ಗೆಲುವು

ಭಾರತದಲ್ಲೇ ಭಾರತ ವಿರುದ್ಧ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯಧಿಕ ವೈಯುಕ್ತಿಕ ರನ್​ ಗಳಿಸಿದ ದಾಖಲೆ ಜಿಂಬಾಬ್ವೆ ತಂಡದ ಆ್ಯಂಡಿ ಫ್ಲವರ್​ ಹೆಸರಿನಲ್ಲಿದೆ. 2000ದಲ್ಲಿ ನಾಗ್ಪುರದಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಅವರು ಅಜೇಯ 232 ರನ್ ಬಾರಿಸಿದ್ದರು. ಸದ್ಯ ಇದು ದಾಖಲೆಯಾಗಿಯೇ ಉಳಿದಿದೆ. ದ್ವಿತೀಯ ಸ್ಥಾನದಲ್ಲಿ ನ್ಯೂಜಿಲ್ಯಾಂಡ್​ನ ಬ್ರೆಂಡನ್​ ಮೆಕಲಮ್ ಕಾಣಿಸಿಕೊಂಡಿದ್ದಾರೆ. ಮೆಕಲಮ್​ 225 ರನ್​ ಬಾರಿಸಿದ್ದರು. ಆ ಬಳಿಕ ಸ್ಥಾನ ಗ್ಯಾರಿ ಸೋಬರ್ಸ್​ (198).

26 ವರ್ಷದ ಒಲಿ ಪೋಪ್​ ಅವರು 196 ರನ್​ ಬಾರಿಸದೇ ಹೋಗಿದ್ದರೆ ಇಂಗ್ಲೆಂಡ್​ ತಂಡ ಇನಿಂಗ್ಸ್​ ಸೋಲಿಗೆ ತುತ್ತಾಗುತ್ತಿತ್ತು. ಇವರ ಏಕಾಂಗಿ ಬ್ಯಾಟಿಂಗ್​ ಸಾಹಸದಿಂದ ಇಂಗ್ಲೆಂಡ್ ತಂಡ​ 420 ರನ್​ ಬಾರಿಸಿ ಭಾರತಕ್ಕೆ 231 ರನ್​ಗಳ ಗೆಲುವಿನ ಗುರಿ ನೀಡಿದೆ. ಸದ್ಯ ಈ ಮೊತ್ತವನ್ನು ಬೆನ್ನಟ್ಟುತ್ತಿರುವ ಭಾರತ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಸೋಲುವ ಸ್ಥಿತಿಯಲ್ಲಿದೆ.

Exit mobile version