ಬರ್ಮಿಂಗ್‌ಹ್ಯಾಮ್: ಐಪಿಎಲ್ ಮತ್ತು ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವ ವೇಳೆ ಸ್ಟೇಡಿಯಮ್ ಮೇಲೆ ರೋಪ್‌ನಲ್ಲಿ ಕ್ಯಾಮೆರಾವೊಂದು ಚಲಿಸುವುದನ್ನು ಗಮನಿಸಿರಬಹುದು. ಅದನ್ನು ಸ್ಪೈಡರ್ ಕ್ಯಾಮೆರಾ ಎಂದು ಕರೆಯುತ್ತಾರೆ ಹಾಗೂ ಆಟವನ್ನು ಮೇಲಿನಿಂದ ಚಿತ್ರೀಕರಿಸಲು ಬಳಸಲಾಗುತ್ತದೆ. ಇದು ಟಿವಿ ವೀಕ್ಷಕರಿಗೆ ವಿಶೇಷ ಅನುಭವ ಕೊಡುತ್ತದೆ. ಅಂತೆಯೇ ಭಾರತ ಹಾಗೂ ಇಂಗ್ಲೆಂಡ್ ನಡುವೆ ಶುಕ್ರವಾರ ಆರಂಭವಾಗಲಿರುವ ಟೆಸ್ಟ್ ಪಂದ್ಯದ ವೇಳೆ Fielder ಒಬ್ಬರ ತಲೆ ಮೇಲೆ ಗೊಪ್ರೊ ಕ್ಯಾಮೆರಾ ಅಳವಡಿಸಲು ಸಿದ್ಧತೆ ನಡೆದಿದೆ.
ಐದನೇ ಟೆಸ್ಟ್ ಪಂದ್ಯದ ನೇರ ಪ್ರಸಾರ ಹಕ್ಕು ಸ್ಕೈ ಸ್ಪೋರ್ಟ್ಸ್ ಬಳಿ ಇದೆ. ಹೀಗಾಗಿ ವೀಕ್ಷಕರಿಗೆ ವಿಭಿನ್ನ ದೃಶ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶಾರ್ಟ್ ಲೆಗ್ ಬಳಿ ಫೀಲ್ಡಿಂಗ್ ಮಾಡುವ ಇಂಗ್ಲೆಂಡ್ ತಂಡದ ಆಟಗಾರ ಒಲಿ ಪೋಪ್ ಹೆಲ್ಮೆಟ್ ಮೇಲೆ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಹಾಗೂ ಇಸಿಬಿಯ ಅನುಮತಿಯನ್ನೂ ಪಡೆದುಕೊಂಡಿದೆ.
ಶಾರ್ಟ್ ಲೆಗ್‌ನಲ್ಲಿ ಫೀಲ್ಡ್ ಮಾಡುವ ಫೀಲ್ಡರ್ ಬ್ಯಾಟ್ಸ್‌ಮನ್‌ಗೆ ಹತ್ತಿರದಲ್ಲಿ ಇರುತ್ತಾರೆ. ಹೀಗಾಗಿ ಬ್ಯಾಟ್ಸಮನ್ ಕಲಾತ್ಮಕ ಶೈಲಿಗಳು ಈ ಕ್ಯಾಮೆರಾದಲ್ಲಿ ಸೆರೆಯಾಗಲಿವೆ. ಈ ಕ್ಯಾಮೆರಾಕ್ಕೆ ದೃಶ್ಯ ಗ್ರಹಿಸುವ ಅನುಮತಿಯನ್ನು ಮಾತ್ರ ನೀಡಲಾಗಿದೆ. ಧ್ವನಿ ಗ್ರಹಣಕ್ಕೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ಆಟಗಾರರ ನಡುವಿನ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಳ್ಳುವ ಅವಕಾಶ ಇಲ್ಲ.
ಒಂದು ವೇಳೆ ಯೋಜನೆ ಕಾರ್ಯ ರೂಪಕ್ಕೆ ಬಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಗೊಪೊ ಕ್ಯಾಮೆರಾ ಬಳಸಿದಂತಾಗುತ್ತದೆ.