ಕೋಲ್ಕೊತಾ : ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಹಾಗೂ ಒಲಿಂಪಿಯನ್ ಫುಟ್ಬಾಲ್ ಆಟಗಾರ ತುಳಸಿದಾಸ್ ಬಲರಾಮ್ (87 ವರ್ಷ) ಅವರು ನಿಧನ ಹೊಂದಿದ್ದಾರೆ. ದೀರ್ಘ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬಲರಾಮ್ ಅವರು ಪಶ್ಚಿಮ ಬಂಗಾಳದ ಉತ್ತರಪಾರ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದರು.
ತುಳಸಿದಾಸ್ ಅವರು ಕಳೆದ ಡಿಸೆಂಬರ್ನಲ್ಲಿ ಮೂತ್ರಕೋಶದ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ (ಫೆಬ್ರವರಿ16ರಂದು) ಮೃತಪಟ್ಟಿದ್ದಾರೆ ಎಂಬುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ : Arne Espeel: ಪೆನಾಲ್ಟಿ ಗೋಲ್ ತಡೆದ ಬಳಿಕ ಕೊನೆಯುಸಿರೆಳೆದ ಫುಟ್ಬಾಲ್ ಆಟಗಾರ
ತಮಿಳುನಾಡು ಮೂಲದ ತುಳಸಿದಾಸ್ ಅವರು 1936ರ ಅಕ್ಟೋಬರ್ 4ರಂದು ಜನಿಸಿದ್ದರು. 1950ರಿಂದ 60ರವರೆಗೆ ಭಾರತ ಫುಟ್ಬಾಲ್ ತಂಡದ ಸದಸ್ಯರಾಗಿದ್ದರು. ಅವರು 1960ರ ರೋಮ್ ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅದೇ ವೇಳೆ ಜಕಾರ್ತಾ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿಯೂ ಇದ್ದರು. ಸ್ಪರ್ಧಾತ್ಮಕ ಫುಟ್ಬಾಲ್ನಲ್ಲಿ ಅವರು ಒಟ್ಟಾರೆ 131 ಗೋಲ್ಗಳನ್ನು ಬಾರಿಸಿದ್ದಾರೆ.