ಬೆಂಗಳೂರು: ಚಿನ್ನದ ಹುಡುಗ, ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು 2023 ವರ್ಷದ ವಿಶ್ವ ಅಥ್ಲೀಟ್ ಪ್ರಶಸ್ತಿಗೆ(athlete of the year) ನಾಮಿನೇಟ್ ಆಗಿದ್ದಾರೆ. ಈ ಪ್ರಶಸ್ತಿಗೆ ಮೊದಲ ಬಾರಿ ನೀರಜ್ ನಾಮನಿರ್ದೇಶಿತರಾಗಿದ್ದಾರೆ. ವಾರಗಳ ಹಿಂದೆ ಚೀನಾದಲ್ಲಿ ಮುಕ್ತಾಯಕಂಡ ಏಷ್ಯನ್ ಗೇಮ್ಸ್ನಲ್ಲಿ ನೀರಜ್ 88.88 ಮೀಟರ್ ಜಾವೆಲಿನ್ ಎಸೆದು ಚಿನ್ನ ಗೆದ್ದ ಸಾಧನೆ ಮಾಡಿದ್ದರು.
ವಿಶ್ವ ಅಥ್ಲೀಟ್ ಪ್ರಶಸ್ತಿಗೆ ಒಟ್ಟು 11 ಮಂದಿ ನಾಮಿನೇಟ್ ಆಗಿದ್ದಾರೆ. ಶಾಟ್ಪುಟ್ ವಿಶ್ವ ಚಾಂಪಿಯನ್ ರಯಾನ್ ಕ್ರೌಸರ್, ಪೋಲ್ ವಾಲ್ಟ್ ಆಟಗಾರ ಮೊಂಡೋ ಡುಪ್ಲಾಂಟಿಸ್ ಮತ್ತು 100 ಮೀ ಮತ್ತು 200 ಮೀ ವಿಶ್ವ ಚಾಂಪಿಯನ್ ನೋಹ್ ಲೈಲ್ಸ್ ರೇಸ್ನಲ್ಲಿರುವ ಪ್ರಮುಖರು. ಇವರನ್ನೆಲ್ಲ ಹಿಂದಿಕ್ಕಿ ನೀರಜ್ ಈ ಪ್ರಶಸ್ತಿ ಪಡೆದರೆ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲಿದ್ದಾರೆ.
ಈ ವರ್ಷದಲ್ಲಿ ನೀರಜ್ ಸ್ಪರ್ಧಿಸಿದ ಹಲವು ಕೂಟಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ, ಡೈಮಂಡ್ ಲೀಗ್ನ ಆರಂಭಿಕ ಎರಡು ಚರಣಗಳಲ್ಲಿ ಚಿನ್ನ ಮತ್ತು ಅಂತಿಮ ಸುತ್ತಿನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಯನ್ನು ಬರೆದಿದ್ದರು.
ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ನೀರಜ್ ಮೇಲೆ ಚಿನ್ನದ ಪದಕದ ಬರವಸೆಯನ್ನು ಇಡಲಾಗಿದೆ. ಅವರ ಪ್ರದರ್ಶನವನ್ನು ಕಾಣುವಾಗ ಚಿನ್ನ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಚಿನ್ನ ಗೆಲ್ಲಬೇಕೆಂಬುದೇ ಎಲ್ಲ ಭಾರತೀಯರ ಆಶಯವಾಗಿದೆ.
ಇದನ್ನೂ ಓದಿ Neeraj Chopra : ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾಗೆ ಎರಡನೇ ಸ್ಥಾನ
ಪ್ರಶಸ್ತಿ ಪಟ್ಟಿಯಲ್ಲಿರುವ ಪ್ರಮುಖರು
ನೀರಜ್ ಚೋಪ್ರಾ. ಜಾವೆಲಿನ್
ರಯಾನ್ ಕ್ರೌಸರ್, ಶಾಟ್ಪುಟ್
ಮೊಂಡೋ ಡುಪ್ಲಾಂಟಿಸ್, ಪೋಲ್ ವಾಲ್ಟ್
ಸೌಫಿಯಾನ್ ಎಲ್ ಬಕ್ಕಲಿ, 3000ಮೀ ಸ್ಟೀಪಲ್‌ಚೇಸ್
ಜಾಕೋಬ್ ಇಂಗೆಬ್ರಿಗ್ಟ್ಸೆನ್, 1500ಮೀ/ಮೈಲ್/5000ಮೀ
ಕೆಲ್ವಿನ್ ಕಿಪ್ಟಮ್, ಮ್ಯಾರಥಾನ್
ಪಿಯರ್ಸ್ ಲೆಪೇಜ್, ಡೆಕಾಥ್ಲಾನ್
ನೋಹ್ ಲೈಲ್ಸ್, 100ಮೀ/200ಮೀ
ಅಲ್ವಾರೊ ಮಾರ್ಟಿನ್, ರೇಸ್ ವಾಕ್
ಮಿಲ್ಟಿಯಾಡಿಸ್ ಟೆಂಟೊಗ್ಲೋ, ಲಾಂಗ್ ಜಂಪ್
ಕಾರ್ಸ್ಟೆನ್ ವಾರ್ಹೋಮ್, 400ಮೀ ಹರ್ಡಲ್ಸ್/400ಮೀ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಯೂ ಚಿನ್ನ
ನೀರಜ್ ಅವರ ಮೊದಲ ಕೋಚ್ ಕಾಶಿನಾಥ್ ನಾಯ್ಕ್ ಅವರು ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿಯೂ(neeraj chopra paris olympics) ನೀರಜ್ ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಇತ್ತೀಚೆಗೆ ಸಂದರ್ಶನವೊಂದಲ್ಲಿ ಭವಿಷ್ಯ ನುಡಿದಿದ್ದರು.
“ನಾನು 2015 ರಿಂದ ನೀರಜ್ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು. ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್ ಎಸೆಯುವದು ಪ್ರಮುಖ ಗುರಿ ಎಂದು ನೀರಜ್ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದರು.