Site icon Vistara News

Olympics 2024: ಕಂಚು ಗೆದ್ದ ಮನು-ಸರಬ್ಜೋತ್​ ಜೋಡಿಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಐಒಸಿ ಸದಸ್ಯೆ ನೀತಾ ಅಂಬಾನಿ ಅಭಿನಂದನೆ

Olympics 2024

Olympics 2024-pm-modi-president-droupadi-murmu-congratulates-indias-10m-air-pistol-mixed-team-for-winning-bronze

ಪ್ಯಾರಿಸ್​: 2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ(Olympics 2024) 10 ಮೀಟರ್ ಮಿಶ್ರ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಮನು ಭಾಕರ್​(Manu Bhaker) ಮತ್ತು ಸರಬ್ಜೋತ್‌ ಸಿಂಗ್‌(Sarabjot Singh) ಜೋಡಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu), ಪ್ರಧಾನಿ ನರೇಂದ್ರ ಮೋದಿ(Narendra Modi), ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ(International Olympic Committee) ಸದಸ್ಯೆ ಹಾಗೂ ರಿಲಯನ್ಸ್ ಫೌಂಡೇಶನ್ (Reliance Foundation) ಸಂಸ್ಥಾಪಕಿಯಾಗಿರುವ ನೀತಾ ಅಂಬಾನಿ(Nita Ambani) ಸೇರಿ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಭಾರತ ಒಲಿಂಪಿಕ್ಸ್​ನಲ್ಲಿ 2 ಪದಕ ಗೆದ್ದು 27ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಹಲವು ಪ್ರಶಸ್ತಿ ಗೆಲ್ಲುವಂತಾಗಲಿ; ರಾಷ್ಟ್ರಪತಿ ಶುಭ ಹಾರೈಕೆ


ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದ್ದು, ’10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು!. ಮನು ಭಾಕರ್ ಅವರು ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರ ಈ ಸಾಧನೆ ನಮಗೆ ಅಪಾರ ಹೆಮ್ಮೆ ತಂದಿದೆ. ಭವಿಷ್ಯದಲ್ಲಿ ಭಾಕರ್​ ಮತ್ತು ಸರಬ್ಜೋತ್ ಸಿಂಗ್ ಇನ್ನೂ ಹಲವು ಪ್ರಶಸ್ತಿಗಳನ್ನು ಗೆಲ್ಲುವಂತಾಗಲಿ’ ಎಂದು ಹಾರೈಸಿದ್ದಾರೆ.

ಪ್ರಧಾನಿ ಮೋದಿ ಕೂಡ ಎಕ್ಸ್ ಪೋಸ್ಟ್ ಮಾಡಿದ್ದು, ‘ಒಲಿಂಪಿಕ್ಸ್​ನಲ್ಲಿ ನಮ್ಮ ಶೂಟರ್‌ಗಳು ಮತ್ತೊಮ್ಮೆ ಹೆಮ್ಮೆ ಪಡಿಸುವುದನ್ನು ಮುಂದುವರೆಸಿದ್ದಾರೆ! ಇಬ್ಬರೂ ಶೂಟರ್​ಗಳು ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರುವ ಮೂಲಕ ಪದಕ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದಾರೆ. ನಿಮ್ಮ ಈ ಸಾಧನೆಯಿಂದ ಕೋಟ್ಯಂತರ ದೇಶವಾಸಿಗಳು ಕೂಡ ಸಂತಸಗೊಂಡಿದ್ದಾರೆ. 2ನೇ ಪದಕ ಗೆದ್ದ ಮನು ಅವರಿಗೆ ವಿಶೇಷ ಅಭಿನಂದನೆಗಳು” ಎಂದು ಮೋದಿ ಬರೆದುಕೊಂಡಿದ್ದಾರೆ.

ಈ ದಿನ ಮರೆಯಲು ಅಸಾಧ್ಯ; ನೀತಾ ಅಂಬಾನಿ


ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ 2 ಪದಕ ಗೆದ್ದ ಭಾರತ ಶೀಘ್ರದಲ್ಲೇ ಮತ್ತೊಂದು ಪದಕ ಗೆಲ್ಲಲಿದೆ ಎಂದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಹಾಗೂ ಐಒಸಿ ಸದಸ್ಯೆ ನೀತಾ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಈವೆಂಟ್ ತಂಡದಲ್ಲಿ ಕಂಚಿನ ಪದಕ ಗೆದ್ದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ Paris Olympics 2024: ಶೂಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಮನು ಭಾಕರ್-ಸರಬ್ಜೋತ್‌ ಜೋಡಿ

“ಒಲಿಂಪಿಕ್ಸ್‌ನಲ್ಲಿ ಭಾರತೀಯ ಶೂಟರ್​ಗಳು ದೇಶಕ್ಕೆ 2ನೇ ಪದಕ ಗೆದ್ದು ಇತಿಹಾಸವನ್ನು ಸೃಷ್ಟಿಸಿದ್ದಾರೆ!. ಅದರಲ್ಲೂ ಒಂದೇ ಒಲಿಂಪಿಕ್ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದ ಮನು ಅವರಿಗೆ ವಿಶೇಷವಾಗಿ ಅಭಿನಂದನೆ. ನಿಮ್ಮ ಈ ಸಾಧನೆಯಿಂದ ಇಡೀ ರಾಷ್ಟ್ರವೇ ಹೆಮ್ಮೆ ಪಡುವಂತೆ ಮಾಡಿದೆ. ‘Cheer for India’ ಭಾರತೀಯ ಕ್ರೀಡಾಪಟುಗಳು ಇನ್ನೂ ಹಲವು ಪದಕ ಗೆದ್ದು ದೇಶದ ಕೀರ್ತಿ ಪತಾಕೆಯನ್ನು ಪ್ಯಾರಿಸ್​ನಲ್ಲಿ ಹಾರಿಸುವಂತಾಗಲಿ” ಎಂದು ನೀತಾ ಅಂಬಾನಿ ಹಾರೈಸಿದ್ದಾರೆ. ಕಳೆದ ವಾರವಷ್ಟೇ ನೀತಾ ಅಂಬಾನಿ ಅವರು 2ನೇ ಬಾರಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಮಂಗಳವಾರ ನಡೆದ 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಕಂಚಿನ ಪದಕ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಜತೆಗೂಡಿ ಮನು ಭಾಕರ್ ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ  16-10 ಅಂಕಗಳಿಂದ ಗೆದ್ದು ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು.

Exit mobile version