ಮುಂಬಯಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ವಿಶ್ವಕಪ್ ಫೈನಲ್(Cricket World Cup 2023 Final) ಪಂದ್ಯದ ವೇಳೆ ಚಿನ್ನದ ಹುಡುಗ ಎಂದೇ ಖ್ಯಾತಿಗಳಿಸಿರುವ ನೀರಜ್ ಚೋಪ್ರಾ(Neeraj Chopra) ಅವರನ್ನು ಒಂದು ಬಾರಿಯೂ ಕ್ರೀಡಾಂಗಣದ ಪರದೆ, ನೇರಪ್ರಸಾರದಲ್ಲಿ ಸರಿಯಾಗಿ ತೋರಿಸಿಲ್ಲ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಸ್ವತಃ ನೀರಜ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾ ಸೇರಿ ಅನೇಕ ಗಣ್ಯರನ್ನು ಫೈನಲ್ ಪಂದ್ಯದ ವೇಳೆ ನೇರ ಪ್ರಸಾರ ಮತ್ತು ಸ್ಟೇಡಿಯಂನ ದೊಡ್ಡ ಪರದೆಯಲ್ಲಿ ತೋರಿಸಲಾಗಿದೆ. ಆದರೆ, ದೇಶಕ್ಕೆ ಕೀರ್ತಿ ತಂದ ಮತ್ತು ದೇಶದ ಗೌರವವನ್ನು ಎಲ್ಲಡೆ ಸಾರಿದ ಕ್ರೀಡಾಪಟು ನೀರಜ್ ಚೋಪ್ರಾ ಅವರನ್ನು ಕಡೆಗಣಿಸಲಾಗಿದೆ ಎಂದು ಅವರ ಅಭಿಮಾನಿಗಳು ಮತ್ತು ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ವಿವಾದಾತ್ಮಕ ಚರ್ಚೆಗಳು ಜೋರಾಗುತ್ತಿದ್ದಂತೆ ಸ್ವತಃ ನೀರಜ್ ಅವರು ಈ ಬಗ್ಗೆ ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ.
“ನಾನು ಸ್ಪರ್ಧಿಸುವಾಗ ಕ್ಯಾಮೆರಾ ನನ್ನನ್ನು ಸ್ಕ್ರೀನ್ ಮೇಲೆ ತೋರಿಸಬೇಕು. ಇಲ್ಲಿ ನಾನು ಸ್ಪರ್ಧಿಸಿಲ್ಲ ಹೀಗಾಗಿ ನನ್ನನ್ನು ಸ್ಕ್ರೀನ್ ಮೇಲೆ ತೋರಿಸಿಲ್ಲ. ನಾನು ಡೈಮಂಡ್ ಲೀಗ್‌ನಲ್ಲಿ ಪಾಲ್ಗೊಳ್ಳುವಾಗ ಸರಿಯಾಗಿ ತೋರಿಸಲಿಲ್ಲ. ಇದು ಅಸಲಿ ಕಹಾನಿ. ಫೈನಲ್ ಪಂದ್ಯವನ್ನು ಎಂಜಾಯ್ ಮಾಡಿದ್ದೇನೆ. ಭಾರತ ಚಾಂಪಿಯನ್ ವಿಶ್ವಕಪ್ ಗೆಲ್ಲುತ್ತಿದ್ದರೆ ನನ್ನ ಖುಷಿ ಡಬಲ್ ಆಗುತ್ತಿತ್ತು. ಕ್ಯಾಮೆರಾ ನನ್ನತ್ತ ತಿರುಗಿ ನನ್ನನ್ನು ಸ್ಕ್ರೀನ್ ಮೇಲೆ ತೋರಿಸಬೇಕು ಎನ್ನುವ ಯಾವುದೇ ಆಲೋಚನೆ ಇರಲಿಲ್ಲ. ಸುಮ್ಮನೆ ವಿವಾದಾತ್ಮಕ ಚರ್ಚೆಗಳನ್ನು ಮಾಡುವುದು ಒಳ್ಳೆಯದಲ್ಲ” ಎಂದಿದ್ದಾರೆ.
ಇದನ್ನೂ ಓದಿ Neeraj Chopra : ವ್ಯರ್ಥವಾಯಿತು ನೀರಜ್ ಚೋಪ್ರಾ ಅವರ ಬೃಹತ್ ಎಸೆತ; ಆದ್ರೂ ಸಿಕ್ಕಿತು ಚಿನ್ನ
ಬುಮ್ರಾಗೆ ಸಲಹೆ ನೀಡಿದ ನೀರಜ್
ನೀರಜ್ ಚೋಪ್ರಾ ತಮ್ಮ ನೆಚ್ಚಿನ ಮತ್ತು ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ತಮ್ಮ ವೇಗವನ್ನು ಹೆಚ್ಚಿಸುವ ಕುರಿತು ಒಳನೋಟದ ಸಲಹೆ ನೀಡಿದ್ದಾರೆ. ತಮ್ಮ ಎಸೆತಗಳಿಗೆ ಇನ್ನಷ್ಟು ವೇಗ ನೀಡಲು ಬುಮ್ರಾ ತಮ್ಮ ರನ್-ಅಪ್ ಅನ್ನು ಹೆಚ್ಚಿಸಬೇಕು ಎಂದು ನಾನು ಭಾವಿಸುತ್ತೇನೆ. ಜಾವೆಲಿನ್ ಎಸೆತಗಾರರಾಗಿ ನಾನು ಹೇಳುವುದಾದರೆ ಬೌಲರ್ಗಳು ತಮ್ಮ ರನ್-ಅಪ್ ಅನ್ನು ಸ್ವಲ್ಪ ಹಿಂದಿನಿಂದ ಪ್ರಾರಂಭಿಸಿದರೆ ವೇಗವನ್ನು ವೃದ್ದಿಸಲು ಸಾಧ್ಯವಿದೆ ಎಂದು ಹೇಳುತ್ತೇನೆ. ಆದರೆ, ಬುಮ್ರಾ ಅವರ ಬೌಲಿಂಗ್ ಶೈಲಿಯನ್ನು ನಾನು ಇಷ್ಟಪಡುತ್ತೇನೆ, “ಎಂದು ಅವರು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿಯೂ ಚಿನ್ನ
ನೀರಜ್ ಅವರ ಮೊದಲ ಕೋಚ್ ಕಾಶಿನಾಥ್ ನಾಯ್ಕ್ ಅವರು ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿಯೂ(neeraj chopra paris olympics) ನೀರಜ್ ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಇತ್ತೀಚೆಗೆ ಸಂದರ್ಶನವೊಂದಲ್ಲಿ ಭವಿಷ್ಯ ನುಡಿದಿದ್ದರು.
“ನಾನು 2015 ರಿಂದ ನೀರಜ್ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು. ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್ ಎಸೆಯುವದು ಪ್ರಮುಖ ಗುರಿ ಎಂದು ನೀರಜ್ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದ್ದರು.