Site icon Vistara News

Yuvaraj Singh | ಯುವರಾಜ್‌ ಸಿಂಗ್‌ ಅವರ 6X6 ಸಾಧನೆಗೆ 15 ವರ್ಷ, ಪುತ್ರನಿಂದ ಅಪ್ಪನ ಸಾಹಸ ವೀಕ್ಷಣೆ

ಮುಂಬಯಿ : ಭಾರತ ಕ್ರಿಕೆಟ್‌ ತಂಡ ಕಂಡಿರುವ ಅತ್ಯಂತ ಯಶಸ್ವಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌, ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಒಂದು ಓವರ್‌ನ ಆರೂ ಎಸೆತಗಳಿಗೆ ಸಿಕ್ಸರ್‌ ಬಾರಿಸಿ ದಾಖಲೆ ಮಾಡಿದ ಸಂದರ್ಭಕ್ಕೆ ಸೋಮವಾರಕ್ಕೆ (ಸೆಪ್ಟೆಂಬರ್‌೧೯ಕ್ಕೆ) ೧೫ ವರ್ಷಗಳು ಸಂದಿತು. ಯುವರಾಜ್‌ ಸಿಂಗ್‌ ಮಾಡಿರುವ ಈ ಸಾಧನೆ ಕ್ರಿಕೆಟ್‌ ಪ್ರೇಮಿಗಳ ಮನದಿಂದ ಇನ್ನೂ ಹಸಿರಾಗಿಯೇ ಉಳಿದಿದ್ದು, ಭಾರತ ಕ್ರಿಕೆಟ್‌ ಇತಿಹಾಸದ ಅತ್ಯಂತ ಸ್ಫೋಟಕ ಬ್ಯಾಟಿಂಗ್‌ ಎನಿಸಿಕೊಂಡಿದೆ.

೨೦೦೭ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ೨೦ ವಿಶ್ವ ಕಪ್‌ನಲ್ಲಿ ಈ ಸಾಧನೆ ಮಾಡಿದ್ದರು ಪಂಜಾಬ್‌ನ ಆಟಗಾರ. ಸೂಪರ್‌-೮ ಹಂತದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಬೌಲರ್‌ ಸ್ಟುವರ್ಟ್‌ ಬ್ರಾಡ್ ಅವರ ಅವರ ಓವರ್‌ನಲ್ಲಿ ಯುವರಾಜ್‌ ಸಿಕ್ಸರ್‌ ಬಾರಿಸಿದ್ದರು. ಈ ಮೂಲಕ ಪಂದ್ಯವೊಂದರಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಅದಕ್ಕಿಂತ ಮೊದಲು ದಕ್ಷಿಣ ಆಫ್ರಿಕಾ ತಂಡದ ಹರ್ಷೆಲ್‌ ಗಿಬ್ಸ್‌ ಅವರು ಈ ಸಾಧನೆ ಮಾಡಿದ್ದರು. ಆದರೆ, ಟಿ೨೦ ಮಾದರಿಯಲ್ಲಿ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.

ಸೂಪರ್ ೮ ಹಂತದ ಮೊದಲೆರಡು ಪಂದ್ಯಗಳಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡ ಸೋಲು ಕಂಡಿತ್ತು. ಹೀಗಾಗಿ ಉಭಯ ತಂಡಗಳಿಗೆ ಎರಡನೇ ಹಣಾಹಣಿಯಲ್ಲಿ ಗೆಲುವಿನ ಅನಿವಾರ್ಯತೆಯಿತ್ತು. ಅಂತೆಯೇ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ೧೮ ಓವರ್‌ಗಳಲ್ಲಿ ೩ ವಿಕೆಟ್‌ ಕಳೆದುಕೊಂಡು ೧೭೧ ರನ್ ಬಾರಿಸಿ ಸುಸ್ಥಿತಿಯಲ್ಲಿತ್ತು. ಆ ಬಳಿಕ ಅಬ್ಬರದ ಬ್ಯಾಟಿಂಗ್‌ ನಡೆಸಿದ ಯುವರಾಜ್‌ ಸಿಂಗ್‌ ಹೊಸ ದಾಖಲೆ ಸೃಷ್ಟಿಸಿದರು.

೧೯ನೇ ಓವರ್‌ನ ಕೊನೆಯಲ್ಲಿ ಆಂಡ್ರ್ಯೂ ಫ್ಲಿಂಟಾಫ್‌ ಹಾಗೂ ಯುವರಾಜ್‌ ಸಿಂಗ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೋಪಗೊಂಡ ಯುವರಾಜ್‌ ಸಿಂಗ್‌ ಅವರ ಬ್ರಾಡ್ ಅವರ ಕೊನೇ ಓವರ್‌ನಲ್ಲಿ ಸತತ ೬ ಸಿಕ್ಸರ್‌ ಬಾರಿಸಿದ್ದರು. ಅಂತೆಯೇ ೧೨ ಎಸೆತಕ್ಕೆ ಅರ್ಧ ಶತಕ ಬಾರಿಸಿ ವಿಶ್ವ ದಾಖಲೆ ಮಾಡಿದ್ದರು. ಯುವರಾಜ್‌ ಅವರ ಸಾಹಸದಿಂದ ಭಾರತ ತಂಡ ೨೦ ಓವರ್‌ಗಳಲ್ಲಿ ೪ ವಿಕೆಟ್‌ಗೆ ೨೧೮ ರನ್‌ ಬಾರಿಸಿತ್ತು. ಬಳಿಕ ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ ೬ ವಿಕೆಟ್‌ಗೆ ೨೦೦ ರನ್‌ ಬಾರಿಸಿ ಸೋಲೊಪ್ಪಿಕೊಂಡಿತ್ತು.

ಮಗನೊಂದಿಗೆ ಸಾಹಸದ ಸ್ಮರಣೆ

ಯುವರಾಜ್‌ ಸಿಂಗ್‌ ತಾವು ಸಿಕ್ಸರ್‌ ಸಾಧನೆ ಮಾಡಿರುವ ವಿಡಿಯೊವನ್ನು ಪತ್ರ ಒರಿಯಾನ್‌ ಕೀಚ್‌ ಸಿಂಗ್‌ಗೆ ತೋರಿಸುತ್ತಿರುವುದನ್ನು ಟ್ವೀಟ್‌ ಮಾಡಿದ್ದಾರೆ.

ದಾಖಲೆ ಮಾಡಿ ೧೫ ವರ್ಷವಾದ ಹಿನ್ನೆಲೆಯಲ್ಲಿ ಅವರು ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ. ತಾವು ಸಿಕ್ಸರ್ ಬಾರಿಸುವ ವಿಡಿಯೊ ನೋಡಿ ಮಗನೊಂದಿಗೆ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ | ಯುವರಾಜ್‌ ಸಿಂಗ್‌ಗೆ ಟಿ20 ತಂಡದ ನಾಯಕತ್ವ ತಪ್ಪಿದ್ದು ಹೇಗೆ?

Exit mobile version