Site icon Vistara News

‘ಇದು ನಿಮ್ಮಿಂದ ಮಾತ್ರ ಸಾಧ್ಯ’; ಮ್ಯಾಕ್ಸ್​ವೆಲ್​ಗೆ ಕಿಂಗ್​ ಕೊಹ್ಲಿಯಿಂದ ಮೆಚ್ಚುಗೆ

Glenn Maxwell and Virat Kohli

ಬೆಂಗಳೂರು: ಗಾಯದ ಮಧ್ಯೆಯೂ ಅಸಾಮಾನ್ಯ ಬ್ಯಾಟಿಂಗ್​ ಹೋರಾಟ ನಡೆಸಿ ಆಸ್ಟ್ರೇಲಿಯಾ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಅವರ ಸಾಹಸಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(Virat Kohli) ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕೊಹ್ಲಿಯ ಪೋಸ್ಟ್​

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮೆಚ್ಚುಗೆಯ ಪೋಸ್ಟ್​ ಮಾಡಿರುವ ಕೊಹ್ಲಿ, “ಇದು ನಿಮ್ಮಿಂದ ಮಾತ್ರ ಸಾಧ್ಯ ಫ್ರೀಕ್​” ಎಂದು ಬರೆದುಕೊಂಡಿದ್ದಾರೆ. ಮ್ಯಾಕ್ಸ್​ವೆಲ್​ ಮತ್ತು ಕೊಹ್ಲಿ ಐಪಿಎಲ್​ನಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ.

ಆಸ್ಟ್ರೇಲಿಯಾ ತಂಡ 49 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಗ್ಲೆನ್​ ಮ್ಯಾಕ್ಸ್​ವೆಲ್​ ಕೊನೆ ತನಕ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿಕೊಟ್ಟರು. ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಡಿಆರ್​ಎಸ್​ ಮನವಿ ಎದುರಿಸಿದ ಗ್ಲೆನ್​ ಮ್ಯಾಕ್ಸ್​ವೆಲ್ ಅಲ್ಲಿಂದ 128 ಎಸೆತಗಳನ್ನು ಎದುರಿಸಿ 21 ಫೋರ್ ಹಾಗೂ 10 ಸಿಕ್ಸರ್​ಗಳ ನೆರವಿನಿಂದ ದ್ವಿಶತಕ(201*) ಬಾರಿಸಿ ಗೆಲುವು ತಂದುಕೊಟ್ಟರು.

ಇದನ್ನೂ ಓದಿ Glenn Maxwell : ದ್ವಿಶತಕದ ದಾಖಲೆಯ ಶೂರ ಮ್ಯಾಕ್ಸ್​ವೆಲ್​ ವಿಶ್ವ ಕಪ್​ನಿಂದ ಔಟ್​?

ನೂರ್ ಅಹಮದ್​ ಎಸೆತದಲ್ಲಿ ಅಂಪೈರ್ ನೀಡಿದ್ದ ಎಲ್​ಬಿಡಬ್ಲ್ಯು ಔಟ್​ ವಿರುದ್ದ ಡಿಆರ್​ಎಸ್​ ಪಡೆದುಕೊಂಡು ಅಲ್ಲೂ ಬಚಾವಾಗಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಆಫ್ಘನ್ ತಂಡದ ಮುಜೀಬ್​ ಉರ್ ರಹಮಾನ್ ಅವರು ಮ್ಯಾಕ್ಸ್​ವೆಲ್ ಅವರ ಕ್ಯಾಚೊಂದನ್ನು ಕೈ ಚೆಲ್ಲುವ ಮೂಲಕ ಅವರಿಗೆ ಜೀವದಾನ ಕೊಟ್ಟಿದ್ದರು. ಅದರನ್ನು ಸದ್ಬಳಕೆ ಮಾಡಿಕೊಂಡ ಮ್ಯಾಕ್ಸ್​ವೆಲ್​ ಇತಿಹಾಸವನ್ನೇ ಸೃಷ್ಟಿಸಿದರು. ಮತ್ತೊಂದು ತುದಿಯಲ್ಲಿ 68 ಎಸೆತಗಳನ್ನು ಎದುರಿಸಿದ ನಾಯಕ ಪ್ಯಾಟ್​ ಕಮಿನ್ಸ್​ 12 ರನ್ ಮಾತ್ರ ಬಾರಿಸಿದರೂ ಅವರು ಕೊಟ್ಟ ಜತೆಯಾಟವೂ ಗೆಲುವಿಗೆ ಪ್ರಮುಖ ಕಾರಣವಾಯಿತು.

ಗಾಯದ ಮಧ್ಯೆಯೂ ಹೋರಾಟ

ಮ್ಯಾಕ್ಸ್​ವೆಲ್​ ಶತಕ ಬಾರಿಸಿದ ತಕ್ಷಣ ಬೆನ್ನು ನೋವಿಗೆ ಒಳಗಾದರು. ಬಳಿಕ ಅವರು ಅದಕ್ಕೆ ಮೈದಾನದಲ್ಲೇ ಫಿಸಿಯೊಗಳ ಮೂಲಕ ಆರೈಕೆ ಮಾಡಿಸಿಕೊಂಡರು. ಬಳಿಕ ಅವರು ಕಾಲು ನೋವಿಗೆ ಒಳಗಾದರು. ಪದೇ ಪದೇ ನೋವಿಗೆ ಒಳಗಾಗಿ ಮೈದಾನದಲ್ಲಿ ರನ್​ಗಾಗಿ ಓಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಗೆ ಒಳಗಾದರು. ಮುಂಬಯಿಯ ಬಿಸಿಲಿನಲ್ಲಿ ಆಡಿದ್ದ ಅವರಿಗೆ ಬ್ಯಾಟಿಂಗ್​ನ ಕೊನೇ ಹಂತದಲ್ಲಿ ನಡೆಯಲೂ ಸಾಧ್ಯವಾಗಲಿಲ್ಲ. ಆದರೂ ಕೆಚ್ಚೆದೆಯಿಂದ ಹೋರಾಡಿ ಗೆದ್ದರು. ಬರೇ ಫೋರ್, ಸಿಕ್ಸರ್​ಗಳ ಮೂಲಕ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟರು.

Exit mobile version