ಓರ್ಲೀನ್ಸ್ (ಫ್ರಾನ್ಸ್): ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಪ್ರಿಯಾಂಶು ರಾಜಾವತ್(Priyanshu Rajawat) ಇಲ್ಲಿ ನಡೆದ “ಓರ್ಲೀನ್ಸ್ ಮಾಸ್ಟರ್ ಸೂಪರ್ 300”(Orleans Masters) ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಕಳೆದ ವರ್ಷವೂ ರಾಜಾವತ್ ಓರ್ಲೀನ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಆದರೆ ಅಲ್ಲಿ ಎಡವಿದ್ದರು. ಈ ಬಾರಿ ಚೊಚ್ಚಲ ಪ್ರಶಸ್ತಿಯೊಂದಿಗೆ ತವರಿಗೆ ಮರಳಿದ್ದಾರೆ.
ಭಾನುವಾರ ರಾತ್ರಿ ನಡೆದ ರೋಚಕ ಫೈನಲ್ ಹಣಾಹಣಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನ 49ನೇ ಶ್ರೇಯಾಂಕದ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊನಾಸೆನ್(Magnus Johannesen) ವಿರುದ್ಧ 58ನೇ ಶ್ರೇಯಾಂಕದ ಪ್ರಿಯಾಂಶು ರಾಜಾವತ್ 21-15, 19-21, 21-16 ಅಂತರದಿಂದ ಮೇಲುಗೈ ಸಾಧಿಸಿದರು. ಉಭಯ ಆಟಗಾರರ ಈ ಹೋರಾಟ 68 ನಿಮಿಷಗಳ ತನಕ ಸಾಗಿತು.
ಮೊದಲ ಗೇಮ್ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿದ ಪ್ರಿಯಾಂಶು, ದ್ವಿತೀಯ ಗೇಮ್ನಲ್ಲಿ ಕೆಲ ತಪ್ಪುಗಳಿಂದ ಸೋಲು ಕಂಡರು. ಆದರೆ ನಿರ್ಣಾಯಕ ಗೇಮ್ನಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ಕೊಟ್ಟು ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಉಭಯ ಆಟಗಾರರು ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ವಿಶೇಷವೆಂದರೆ 21 ವರ್ಷದ ಈ ಆಟಗಾರರಿಬ್ಬರು ಅರ್ಹತಾ ಸುತ್ತಿನಲ್ಲಿ ಆಡಿ ಫೈನಲ್ಗೆ ಲಗ್ಗೆ ಇಟ್ಟಿದ್ದರು.
ಇದನ್ನೂ ಓದಿ Spanish Para-Badminton: ಕಂಚಿನ ಪದಕ ವಿಜೇತ ಕನ್ನಡಿಗ ಸುಹಾಸ್ ಸ್ವದೇಶಕ್ಕೆ ಆಗಮನ
“ಕಳೆದ ವರ್ಷವೂ ಓರ್ಲೀನ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೆ. ಅದು “ಸೂಪರ್ 100” ಮುಖಾಮುಖಿ ಆಗಿತ್ತು. ಆದರೆ ಅಲ್ಲಿ ನಾನು ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದಿದ್ದೆ. ಈ ಬಾರಿ “ಸೂಪರ್ 300″ಟೂರ್ನಿಯಲ್ಲಿ ಸ್ಪರ್ಧಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ. ಮುಂದಿನ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರಲು ಈ ಪ್ರಶಸ್ತಿ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದೆ’ ಎಂದು ಪ್ರಶಸ್ತಿ ಗೆದ್ದ ಬಳಿಕ ಪ್ರಿಯಾಂಶು ರಾಜಾವತ್ ಹೇಳಿದರು.