ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಶಾಹೀನ್ ಅಫ್ರಿದಿ(Shaheen Afridi) ಪಾಕ್ನ ಮಾಜಿ ನಾಯಕ ಶಾಹಿದ್ ಅಫ್ರಿದಿ(Shahid Afridi) ಅವರ ಮಗಳು ಅಕ್ಸಾ ಜತೆ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ನವಜೋಡಿಗೆ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭ ಹಾರೈಸಿದ್ದರು. ಆದರೆ ಪತ್ನಿಯ ಗೌಪ್ಯತೆಗೆ ಧಕ್ಕೆಯಾದ ವಿಚಾರಕ್ಕೆ ಶಾಹೀನ್ ಅಫ್ರಿದಿ ಬೇಸರ ವ್ಯಕ್ತಪಡಿಸಿದ್ದಾರೆ.
ಶಾಹೀನ್ ಅಫ್ರಿದಿ ಮತ್ತು ಪತ್ನಿ ಅಕ್ಸಾ ಅವರ ವಿವಾಹ ಸಂಭ್ರಮದ ಫೋಟೋಗಳು ಶನಿವಾರದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ಶಾಹೀನ್ ಬೇಸರಗೊಂಡಿದ್ದಾರೆ. ಮದುವೆ ಸಮಾರಂಭದಲ್ಲಿ ಎಲ್ಲರಿಗೂ ಮೊಬೈಲ್ ಫೋನ್ ಬಳಕೆ ನಿಷೇಧ ಮಾಡಲಾಗಿತ್ತು. ಆದರೂ ನವ ಜೋಡಿಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ.
ಇದನ್ನೂ ಓದಿ Shaheen Afridi : ಶಾಹಿದ್ ಅಫ್ರಿದಿಯ ಪುತ್ರಿಯನ್ನು ವಿವಾಹವಾದ ಶಹೀನ್ ಅಫ್ರಿದಿ; ಗಣ್ಯರ ಉಪಸ್ಥಿತಿ
ಈ ಬಗ್ಗೆ ಟ್ವೀಟ್ ಮಾಡಿರುವ ಶಾಹೀನ್ ಅಫ್ರಿದಿ ನಮ್ಮ ವಿನಂತಿಗೆ ಸ್ಪಂದಿಸದೆ ನಮ್ಮ ಸುಂದರ ಕ್ಷಣದ, ನಮ್ಮ ಜೀವನದ ಬಹುಮುಖ್ಯ ದಿನದ ಪೋಟೋಗಳನ್ನು ಕೆಲವರು ಹಂಚಿಕೊಂಡಿದ್ದಾರೆ. ಇದರಿಂದ ನನಗೂ ಹಾಗೂ ನನ್ನ ಪತ್ನಿಯ ಗೌಪ್ಯತೆಗೆ ಧಕ್ಕೆಯಾಗಿದೆ. ದಯವಿಟ್ಟು ಈ ರೀತಿ ಮಾಡಬೇಡಿ. ಇದರಿಂದ ತುಂಬಾ ಬೇಸರವಾಗಿದೆ. ಇನ್ನಾದರೂ ನಮ್ಮ ಮಾತಿಗೆ ಸಹಕರಿಸಿ ಫೋಟೊವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.