ಕೋಲ್ಕತ್ತಾ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋತ ಬಳಿಕ ತಂಡದಲ್ಲಿ ಭಾರಿ ಬದಲಾವಣೆ ಮಾಡಲಾಗುವುದು ಎಂದು ಹೇಳಿ 18 ತಿಂಗಳು ಭಾರತ ತಂಡದಿಂದ ಹೊರಗುಳಿದಿದ್ದ ಅಜಿಂಕ್ಯ ರಹಾನೆಗೆ(Ajinkya Rahane) ಟೆಸ್ಟ್ ತಂಡದ ಉಪನಾಯಕನ ಸ್ಥಾನ ನೀಡಿದ ವಿಚಾರವಾಗಿ ಗಂಗೂಲಿ (Sourav Ganguly) ಪ್ರಶ್ನೆ ಮಾಡಿದ್ದಾರೆ. ಒಂದು ಪಂದ್ಯ ಆಡಿದ ಕಾರಣಕ್ಕೆ ತಂಡಕ್ಕೆ ಉಪನಾಯಕ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.
ವೆಸ್ಟ್ ಇಂಡೀಸ್(West Indies) ವಿರುದ್ಧದ ಟೆಸ್ಟ್ ಸರಣಿಗೆ ಚೇತೇಶ್ವರ್ ಪೂಜಾರ(Cheteshwar Pujara) ಅವರನ್ನು ಕೈ ಬಿಡುವ ಜತೆಗೆ ಅವರನ್ನು ಉಪನಾಯಕನ ಸ್ಥಾನದಿಂದಲೂ ವಜಾಗೊಳಿಸಲಾಗಿತ್ತು. ಈ ಸ್ಥಾನವನ್ನು ಅಜಿಂಕ್ಯ ರಹಾನೆಗೆ ನೀಡಲಾಗಿತ್ತು. ಇದೇ ವಿಚಾರವಾಗಿ ಮಾತನಾಡಿರುವ ಗಂಗೂಲಿ, ‘18 ತಿಂಗಳು ತಂಡದಿಂದ ಹೊರಗಿದ್ದ ರಹಾನೆಯನ್ನು ಕೇವಲ ಒಂದು ಪಂದ್ಯ ಆಡಿದ ಕೂಡಲೇ ಮತ್ತೆ ಉಪನಾಯಕನನ್ನಾಗಿ ಆಯ್ಕೆ ಮಾಡಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ. ಹಲವು ವರ್ಷಗಳಿಂದ ಸತತವಾಗಿ ತಂಡದಲ್ಲಿ ಆಡುತ್ತಿರುವ ಅಶ್ವಿನ್(Ravichandran Ashwin) ಅಥವಾ ರವೀಂದ್ರ ಜಡೇಜಾ(Ravindra Jadeja) ಅವರಿಗೆ ಈ ಸ್ಥಾನ ನೀಡುತ್ತಿದ್ದರೆ ಉತ್ತಮವಾಗಿರುತ್ತಿತ್ತು” ಎಂದು ಗಂಗೂಲಿ ಹೇಳಿದ್ದಾರೆ.
“ನನ್ನ ಪ್ರಕಾರ ರವೀಂದ್ರ ಜಡೇಜಾ ಮತ್ತು ಅಶ್ವಿನ್ ಅವರು ಈ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ. ಏಕೆಂದರೆ ಹಲವು ವರ್ಷಗಳಿಂದ ಅವರು ಭಾರತ ಟೆಸ್ಟ್ ತಂಡದ ಭಾಗವಾಗಿದ್ದು ಆಡುವ ಹನ್ನೊಂದರ ಬಳಗದ ಕಾಯಂ ಸದಸ್ಯರಾಗಿದ್ದಾರೆ. ಹೀಗಾಗಿ ಅವರು ಈ ಸ್ಥಾನಕ್ಕೆ ಸೂಕ್ತ ಆಟಗಾರರು” ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ Team India : ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಬಹಿರಂಗಪಡಿಸಿದ ಸೌರವ್ ಗಂಗೂಲಿ!
ಆಯ್ಕೆ ಸಮಿತಿಯ ನಿರ್ಧಾರವೇ ಸರಿಯಿಲ್ಲ
ಆಯ್ಕೆ ಸಮಿತಿಯ ವಿಚಾರವಾಗಿ ಕೊಂಚ ಗರಂ ಆಗಿಯೇ ಮಾತನಾಡಿರುವ ಗಂಗೂಲಿ, ಪೂಜಾರ, ರಹಾನೆ ಸೇರಿ ಅನೇಕ ಹಿರಿಯ ಆಟಗಾರರನ್ನು ಒಮ್ಮೆ ಆಯ್ಕೆ ಮಾಡುವುದು ಮತ್ತೊಮ್ಮೆ ಕೈಬಿಡುವುದು ಸರಿಯಲ್ಲ. ಅವರ ಅವಶ್ಯಕತೆ ತಂಡಕೆ ಇಲ್ಲ ಎಂದಾದರೆ ಸ್ಪಷ್ಟ ನಿರ್ಧಾರವೊಂದು ತೆಗೆದುಕೊಳ್ಳಬೇಕು ಎಂದರು.