ದುಬೈ : ಟಿ೨೦ ವಿಶ್ವ ಕಪ್‌ಗೆ ಮೊದಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕ್ರಿಕೆಟ್ ಆಟದ ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಹೀಗಾಗಿ ಮುಂಬರುವ ಟಿ೨೦ ವಿಶ್ವ ಕಪ್ ಬದಲಾದ ನಿಯಮಗಳೊಂದಿಗೆ ನಡೆಯಲಿದ್ದು, ಆಟಗಾರರು ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. ಪ್ರಮುಖವಾಗಿ ಚೆಂಡಿಗೆ ಹೊಳಪು ನೀಡಲು ಎಂಜಲು ಹಚ್ಚುವ ಕ್ರಮವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಮಂಕಡ್ ಔಟ್‌ಗೆ ನಿಯಮದ ಮಾನ್ಯತೆ ಲಭಿಸಿದ್ದು ಇನ್ನು ಮುಂದೆ ರನ್‌ಔಟ್ ಎಂದೇ ಪರಿಗಣಿಸಲಾಗುತ್ತದೆ.
ಐಸಿಸಿಯ ಮುಖ್ಯ ಕಾರ್ಯಕಾರಿ ಸಮಿತಿ (ಸಿಇಸಿ) ಸಭೆಯಲ್ಲಿ ಈ ಬದಲಾವಣೆಗಳಿಗೆ ಸಮ್ಮತಿ ಸಿಕ್ಕಿದೆ. ಈ ಬದಲಾವಣೆಗಳನ್ನು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರ ಮುಂದಾಳತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಶಿಫಾರಸು ಮಾಡಿತ್ತು.
ಎಂಜಲು ಸಂಪೂರ್ಣ ಬ್ಯಾನ್
ಫೀಲ್ಡಿಂಗ್ ಮಾಡುವ ತಂಡ ಚೆಂಡಿಗೆ ಹೊಳಪು ನೀಡುವ ಉದ್ದೇಶದಿಂದ ಎಂಜಲು ಹಚ್ಚುತ್ತಿದ್ದ ಪದ್ಧತಿಯನ್ನು ಕೊರೊನಾ ವಕ್ಕರಿಸಿದ ಸಂದರ್ಭದಲ್ಲಿ ನಿಷೇಧ ಮಾಡಲಾಗಿತ್ತು. ಅದನ್ನೀಗ ಕಾಯಂ ಮಾಡಿದ್ದು ಇನ್ನು ಮುಂದೆ ಬೌಲರ್‌ಗಳು ಎಂಜಲು ಬಳಸುವುದು ನಿಯಮಬಾಹಿರವಾಗಿರುತ್ತದೆ.
ಕ್ಯಾಚ್ ಔಟ್ ಮತ್ತು ಬ್ಯಾಟಿಂಗ್
ಇನ್ನು ಮುಂದೆ ಕ್ಯಾಚ್ ಔಟ್ ಆದ ಬಳಿಕ ಆಡಲು ಇಳಿಯುವ ಬ್ಯಾಟರ್ ನೇರವಾಗಿ ಬಂದು ಬ್ಯಾಟ್ ಮಾಡಬೇಕು. ಈ ಹಿಂದೆ ಔಟಾಗುವ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್ ಪಿಚ್‌ನ ಅರ್ಧಭಾಗ ಓಡಿದ್ದರೆ ಬ್ಯಾಟ್ ಮಾಡುವ ಅವಕಾಶ ಲಭಿಸುತ್ತಿತ್ತು. ಕೆಲವೊಂದು ಬಾರಿ ಇದರಿಂದ ತಂಡಕ್ಕೆ ಲಾಭವಾಗುತ್ತಿತ್ತು. ಆದರೆ, ಇನ್ನು ಮುಂದೆ ಹೊಸ ಬ್ಯಾಟರ್ ಆಟ ಮುಂದುವರಿಸಬೇಕಾಗುತ್ತದೆ.
ಎರಡು ನಿಮಿಷದಲ್ಲಿ ಕ್ರೀಸ್‌ನಲ್ಲಿರಬೇಕು
ಒಬ್ಬ ಬ್ಯಾಟರ್ ಔಟಾದ ಬಳಿಕ ಬರುವ ಹೊಸ ಬ್ಯಾಟರ್ ಟೆಸ್ಟ್ ಮತ್ತು ಏಕ ದಿನ ಮಾದರಿಯ ಕ್ರಿಕೆಟ್‌ನಲ್ಲಿ ಎರಡು ನಿಮಿಷದ ಒಳಗೆ ಕ್ರೀಸ್‌ನಲ್ಲಿರಬೇಕು. ಇಲ್ಲವಾದರೆ ಔಟ್ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ ಟಿ೨೦ ಮಾದರಿಯಲ್ಲಿ ಸದ್ಯ ಚಾಲ್ತಿಯಲ್ಲಿರುವ ೯೦ ಸೆಕೆಂಡ್‌ಗಳ ಅವಧಿಯನ್ನು ಬದಲಾಯಿಸಿಲ್ಲ.
ಮಂಕಡ್‌ಗೆ ಮಾನ್ಯತೆ
ಬೌಲಿಂಗ್ ಮಾಡುವ ಮೊದಲೇ ನಾನ್ ಸ್ಟ್ರೈಕ್ ಎಂಡ್‌ನಲ್ಲಿರುವ ಬ್ಯಾಟರ್ ಕ್ರೀಸ್ ಬಿಟ್ಟು ಹೊರಕ್ಕೆ ಹೋಗಿದ್ದು, ಅವರನ್ನು ಬೌಲರ್ ಔಟ್ ಮಾಡಿದರೆ ಮಂಕಡಿಂಗ್ ಎಂದು ಹೇಳಲಾಗುತ್ತಿತ್ತು. ಅದು ವಿವಾದಿತ ಸಂಗತಿಯಾಗಿ ಮಾರ್ಪಟ್ಟಿತ್ತು. ಆದಕ್ಕೀಗ ಮಾನ್ಯತೆ ಲಭಿಸಿದ್ದು, ಮಂಕಡಿಂಗ್ ಅನ್ನೂ ರನ್‌ಔಟ್ ಎಂದು ಪರಿಗಣಿಸಲು ಐಸಿಸಿ ನಿರ್ಧರಿಸಿದೆ.
ಬ್ಯಾಟ್ಸ್‌ಮನ್ ಕ್ರೀಸ್ ಬಿಡುವಂತಾದರೆ ಡೆಡ್‌ಬಾಲ್
ಬೌಲರ್ ಎಸೆಯುವ ಚೆಂಡನ್ನು ಬಾರಿಸಲು ಬ್ಯಾಟರ್ ಕ್ರೀಸ್ ಬಿಟ್ಟು ಆಚೆ ಹೋಗುವಂತಾದರೆ ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಲು ಐಸಿಸಿ ನಿರ್ಧರಿಸಿದೆ. ಈ ಹಿಂದೆ ಬೌಲರ್ ಕೈಯಿಂದ ಜಾರಿದ ಚೆಂಡನ್ನು ಬಾರಿಸಲು ಬ್ಯಾಟರ್‌ಗೆ ಅವಕಾಶವಿತ್ತು. ಅದಕ್ಕೀಗ ನಿಯಂತ್ರಣ ಹೇರಲಾಗಿದೆ.
೫ ರನ್‌ಗಳ ಪೆನಾಲ್ಟಿ
ಬೌಲರ್ ಅಥವಾ ಫೀಲ್ಡರ್ ಉದ್ದೇಶಪೂರ್ವಕವಾಗಿ ಬ್ಯಾಟರ್‌ಗಳಿಗೆ ತೊಂದರೆ ಕೊಟ್ಟರೆ ಅದನ್ನು ತಪ್ಪು ಎಂದು ಪರಿಗಣಿಸುವ ಅಧಿಕಾರ ಅಂಪೈರ್‌ಗಳಿಗೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದರೆ ಎದುರಾಳಿ ತಂಡಕ್ಕೆ ಐದು ಅಂಕಗಳನ್ನು ಅಂಪೈರ್ ಕೊಡಲಿದ್ದಾರೆ.
ಏಕ ದಿನಕ್ಕೂ ಸ್ಲೋ ಓವರ್ ದಂಡ ವಿಸ್ತರಣೆ
ಐಸಿಸಿಯ ಹೊಸ ನಿಯಮದ ಪ್ರಕಾರ ತಂಡವೊಂದು ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸಬೇಕು. ಇಲ್ಲದಿದ್ದರೆ, ಉಳಿದ ಓವರ್‌ಗಳಲ್ಲಿ ೩೦ ಯಾರ್ಡ್ ಸರ್ಕಲ್‌ಗಿಂತ ಆಚೆ ಇರುವ ಫೀಲ್ಡರ್ ಒಬ್ಬನನ್ನು ಕಡಿತ ಮಾಡುವ ಅಧಿಕಾರ ಅಂಪೈರ್‌ಗೆ ನೀಡಲಾಗಿದೆ. ಈ ನಿಯಮ ಸದ್ಯ ಟಿ೨೦ ಮಾದರಿಯಲ್ಲಿ ಚಾಲ್ತಿಯಲ್ಲಿದೆ. ಅದೀಗ ಏಕ ದಿನ ಮಾದರಿಗೂ ವಿಸ್ತರಣೆಯಾಗಿದೆ.
ಇದನ್ನೂ ಓದಿ | ICC Chairman | ಸೌರವ್ ಗಂಗೂಲಿ ಅವರನ್ನು ಐಸಿಸಿಗೆ ಕಳುಹಿಸಿ ಬಿಸಿಸಿಐ ಅಧ್ಯಕ್ಷರಾಗಲು ಜಯ್ ಶಾ ಯೋಜನೆ!