ಬೆಂಗಳೂರು: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ಯುಗದ ಅತ್ಯಂತ ಅಪ್ರತಿಮ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ. ಮೈದಾನದ ಒಳಗೆ ಮತ್ತು ಹೊರಗೆ ಅವರ ಉಪಸ್ಥಿತಿಯು ಒಂದು ದೊಡ್ಡ ಸಂಚಲನ. ಅವರ ಇರುವಿಕೆಯು ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ಕ್ರಿಕೆಟ್ ಕಡೆಗೆ ಸೆಳೆಯುತ್ತದೆ. ಅವರ ಸಲೀಸಾಗಿರುವ ಕ್ರಿಕೆಟ್ ಹೊಡೆತಗಳು ಅವರ ಅಭಿಮಾನಿಗಳ ಮನಸ್ಸಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ. ಅದಕ್ಕಿಂತಲೂ ಮಗಿಲಾಗಿ ವಿಕೆಟ್ಗಳ ನಡುವೆ ಅವರ ಅದ್ಭುತ ಓಟವು ಅವರನ್ನು ಉಳಿದೆಲ್ಲ ಕ್ರಿಕೆಟಿಗರಿಗಿಂತ ಭಿನ್ನ ಎಂಬುದನ್ನು ಸಾಬೀತುಪಡಿಸಿದೆ.
ಫಿಟ್ನೆಸ್ ಕಾಪಾಡಲು ಕೊಹ್ಲಿಯ ಪಡುವ ಶ್ರಮ ಅವರ ವಿಕೆಟ್ಗಳ ನಡುವಿನ ಓಟದಲ್ಲಿ ಪ್ರತಿಫಲಿಸುತ್ತದೆ. ಇದು ಸಹ ಆಟಗಾರರು ಮತ್ತು ಎದುರಾಳಿಗಳನ್ನು ಗೊಂದಲಕ್ಕೆ ಈಡು ಮಾಡುತ್ತದೆ. ಇಎಸ್ಪಿಎನ್ ಕ್ರಿಕ್ಇನ್ಫೋ ಇತ್ತೀಚೆಗೆ ಕೊಹ್ಲಿಯ ಕುರಿತಾಗಿ ಅಂಕಿಅಂಶಗಳನ್ನು ಅನಾವರಣಗೊಳಿಸಿದ್ದು, ಕೊಹ್ಲಿ ಕ್ರಿಕೆಟ್ ಪಿಚ್ನಲ್ಲಿ 500 ಕಿಲೋಮೀಟರ್ಗಿಂತಲೂ ಹೆಚ್ಚು ದೂರ ಓಡಿದ್ದಾರೆ. ಅದರಲ್ಲಿ ಅವರು ತಮ್ಮ ರನ್ಗಳಿಗಾಗಿ ಸರಿಸುಮಾರು 277 ಕಿ.ಮೀ ಮತ್ತು ಅವರ ಸಹ ಬ್ಯಾಟರ್ಗಳ ರನ್ಗಾಗಿ ಹೆಚ್ಚುವರಿ 233 ಕಿ.ಮೀ ಓಡಿದ್ದಾರೆ. ಒಟ್ಟಾರೆಯಾಇ 510 ಕಿ.ಮೀ ದೂರ ಓಡಿದ್ದು, ಅವರ ವೇಗದ ಓಟಕ್ಕೆ ಇದು ಸಾಕ್ಷಿಯಾಗಿದೆ.
ನಾಲ್ಕು ರನ್ ಓಡಿದ ವಿರಾಟ್
2013ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ವಿಕೆಟ್ಗಳ ನಡುವೆ ಪರಾಕ್ರಮದ ಓಟ ನಡೆಸಿದ್ದರು. ಅವರು ಒಂದು ಎಸೆತದಲ್ಲಿ ನಾಲ್ಕು ರನ್ಗಳಿಗಾಗಿ ಓಡಿದ್ದರು. ಇದು ಅವರ ಹಾಗೂ ಕ್ರಿಕೆಟ್ ಕ್ಷೇತ್ರದ ಸ್ಮರಣೀಯ ಓಟ. ವಿಕೆಟ್ಗಳ ನಡುವೆ ತ್ವರಿತ ನಾಲ್ಕು ರನ್ಗಳ ಅವರ ಅಸಾಧಾರಣ ಚುರುಕುತನಕ್ಕೆ ಸಾಕ್ಷಿ.
ಆಗಸ್ಟ್ 18, 2023 ರಂದು, ಕೊಹ್ಲಿ 2008 ರಲ್ಲಿ ಶ್ರೀಲಂಕಾ ವಿರುದ್ಧ ಪಾದಾರ್ಪಣೆ ಮಾಡಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷಗಳನ್ನು ಪೂರ್ಣಗೊಳಿಸುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸ್ಥಾಪಿಸಿದರು. ಗೌತಮ್ ಗಂಭೀರ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ.
ದೈಹಿಕ ಕ್ಷಮತೆ ಅಥವಾ ಕ್ರಿಕೆಟ್ ಸ್ಕೋರ್ಗಳೇ ಆಗಿರಲಿ. ಕೊಹ್ಲಿಯ ಅಚಲ ಬದ್ಧತೆ ಎಲ್ಲರನ್ನೂ ಸೆಳೆಯುತ್ತದೆ. ಟಿ 20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಅವರ ಇತ್ತೀಚಿನ ಇನ್ನಿಂಗ್ಸ್ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಹೃದಯದಲ್ಲಿ ದೀರ್ಘಕಾಲ ಉಳಿಯಲಿದೆ. ಆ ಪಂದ್ಯದಲ್ಲಿ ಅವರು ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರಂತಹ ಬೌಲರ್ಗಳನ್ನು ಹೆಮ್ಮೆಟ್ಟಿಸಿ ಏಕಾಂಗಿಯಾಗಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು.
ಇದನ್ನೂ ಓದಿ : Virat Kohli : 15 ವರ್ಷಗಳ ಕ್ರಿಕೆಟ್ ಪಯಣದಲ್ಲಿ ಕೊಹ್ಲಿಯ ಸಾಧನೆಗಳನ್ನು ವಿವರಿಸಿದಷ್ಟೂ ಮುಗಿಯದು
ಏಷ್ಯಾಕಪ್ ಮತ್ತು ವಿಶ್ವಕಪ್ ಸಮೀಪಿಸುತ್ತಿರುವುದರಿಂದ, ಭಾರತೀಯ ಅಭಿಮಾನಿಗಳು ಸೂಪರ್ ಫಿಟ್ ಮತ್ತು ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿಯ ಆಟಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.