ನವದೆಹಲಿ: ಕ್ರೀಡಾ ಕ್ಷೇತ್ರದ ಅಪ್ರತಿಮ ಸಾಧಕಿ, ವೇಗದ ಓಟಗಾರ್ತಿ ಪಿ ಟಿ ಉಷಾ (P. T. Usha) ದೇಶದ ಅತ್ಯುನ್ನತ ಕ್ರೀಡಾ ಸಂಸ್ಥೆಯಾಗಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಶನಿವಾರ(ಡಿಸೆಂಬರ್ 10) ಅಧಿಕಾರ ಸ್ವೀಕರಿಸಲಿದ್ದಾರೆ. ಇದರೊಂದಿಗೆ ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಶಕೆಯೊಂದು ಆರಂಭವಾಗಲಿದೆ.
1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ 400 ಮೀ ಹರ್ಡಲ್ಸ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಹಾಗೂ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ 58 ವರ್ಷದ ಪಿ.ಟಿ. ಉಷಾ ಅವರು ಸುಪ್ರೀಂ ಕೋರ್ಟ್ ನೇಮಿಸಿದ ನಿವೃತ್ತ ನ್ಯಾಯಾಧೀಶ ಎಲ್. ನಾಗೇಶ್ವರ ರಾವ್ ಮೇಲ್ವಿಚಾರಣೆಯಲ್ಲಿ ನಡೆಯುವ ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗುತ್ತದೆ. ಇದರೊಂದಿಗೆ ಐಒಎಯ 95 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಮೊದಲ ಒಲಿಂಪಿಯನ್ ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತೆ ಎಂಬ ಗೌರವ ಉಷಾ ಅವರ ಪಾಲಾಗಲಿದೆ.
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಟಿ. ಉಷಾ ಅವರ ಅಧಿಕಾರಾವಧಿಯಲ್ಲಿ ಭಾರಿ ನಿರೀಕ್ಷೆ ಇರಿಸಲಾಗಿದೆ. 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಬಲಿಷ್ಠ ಕ್ರೀಡಾ ಪಟುಗಳನ್ನು ಸಿದ್ಧಪಡಿಸಿ ಇಲ್ಲಿ ಅಮೋಘ ಪ್ರದರ್ಶನ ತೋರುವಂತೆ ಮಾಡುವ ಬಲು ದೊಡ್ಡ ಸವಾಲು ಅವರ ಮುಂದಿದೆ.
ಇದನ್ನೂ ಓದಿ | ವಾರದ ವ್ಯಕ್ತಿ ಚಿತ್ರ | ಐಒಎ ಗದ್ದುಗೆ ಏರಲಿದೆ ಗುಡಿಸಲಲ್ಲಿ ಅರಳಿದ ಹೂವು; ಪಿ ಟಿ ಉಷಾ ಮುಡಿಗೆ ಇನ್ನೊಂದು ಗರಿ