ಮುಲ್ತಾನ್ : ಪಾಕ್ ತಂಡ ತವರಿನಲ್ಲೇ ಮುಖಭಂಗ ಅನುಭವಿಸಿದೆ. 17 ವರ್ಷದ ಬಳಿಕ ಪ್ರವಾಸ ಬಂದಿರುವ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವಶ ಪಡಿಸಿಕೊಂಡಿದೆ. ಇದು ಪಾಕಿಸ್ತಾನ ತಂಡದ ಆಟಗಾರರಿಗೆ ಭಾರೀ ನಿರಾಸೆ ಮೂಡಿಸಿದೆ. ಎಷ್ಟರ ಮಟ್ಟಿಗೆ ಎಂದರೆ ಎದುರಾಳಿ ತಂಡದ ಆಟಗಾರರಿಗೆ ಕೈ ಕುಲುಕದಷ್ಟು.
ಪಾಕಿಸ್ತಾನ ತಂಡಕ್ಕೆ 355 ರನ್ಗಳ ಗೆಲುವಿನ ಗುರಿ ನೀಡಿತ್ತು ಪ್ರವಾಸಿ ಇಂಗ್ಲೆಂಡ್ ತಂಡ. ಅಂತೆಯೇ ನಾಲ್ಕನೇ ದಿನದ ಆರಂಭಕ್ಕೆ 4 ವಿಕೆಟ್ ನಷ್ಟಕ್ಕೆ 198 ರನ್ ಬಾರಿಸಿತ್ತು ಪಾಕಿಸ್ತಾನ. ಕೊನೇ ದಿನ ಗೆಲುವಿಗೆ 157 ರನ್ ಬೇಕಾಗಿತ್ತು. ಹೀಗಾಗಿ ಗೆಲುವು ಆತಿಥೇಯ ತಂಡದ ಪಾಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪಾಕ್ ಬಳಗ 328 ರನ್ಗಳಿಗೆ ಆಲ್ಔಟ್ ಆಯಿತು. ಕೊನೆಯದಾಗಿ ಮೊಹಮ್ಮದ್ ಅಲಿ ಶೂನ್ಯಕ್ಕೆ ಔಟಾಗುವ ಮೂಲಕ ಇಂಗ್ಲೆಂಡ್ ತಂಡದ ಜಯ ಖಾತರಿಯಾಯಿತು.
ಒಲಿ ರಾಬಿನ್ಸನ್ ಎಸೆತ ಮೊಹಮ್ಮದ್ ಅಲಿಯ ಬ್ಯಾಟ್ ತಗುಲಿ ಫೀಲ್ಡರ್ ಒಲಿ ಪೋಪ್ ಕೈ ಸೇರಿತ್ತು. ಅದಕ್ಕೆ ಅಂಪೈರ್ ಎರಾಸ್ಮಸ್ ಕೈ ಬೆರಳು ಎತ್ತಿದರು. ಆದರೆ, ಅಲಿ ಅಂಪೈರ್ ತೀರ್ಪು ಮರುಪರಿಶೀಲನೆಗೆ (ಡಿಆರ್ಎಸ್ಗೆ) ಮನವಿ ಮಾಡಿದರು. ಚೆಂಡು ಬ್ಯಾಟ್ಗೆ ಬಡಿದ ಸದ್ದು ಕೇಳಿದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಪಂದ್ಯ ಮುಗೀತು ಎಂದು ಅಂದುಕೊಂಡು ಪಾಕ್ ಆಟಗಾರ ಮೊಹಮ್ಮದ್ ಅಲಿಯ ಕೈ ಕುಲುಕಲು ಮುಂದಾದರು. ಆದರೆ, ಅಲಿ, ಇನ್ನೂ ಡಿಆರ್ಎಸ್ ತೀರ್ಪು ಬಂದಿಲ್ಲ. ಪಂದ್ಯ ಮುಗಿದಿಲ್ಲ. ಹೀಗಾಗಿ ಕೈ ಕುಲುಕುವುದಿಲ್ಲ ಎಂದು ಹೇಳಿದರು. ತಕ್ಷಣ ಎಚ್ಚೆತ್ತ ಸ್ಟೋಕ್ಸ್, ಮರಳಿ ತಂಡದ ಗುಂಪಿನ ಜತೆ ಸೇರಿಕೊಂಡರು.
ಇದನ್ನೂ ಓದಿ | ENGvsPAK | 17 ವರ್ಷದ ಬಳಿಕ ಪಾಕ್ ಪ್ರವಾಸ ಕೈಗೊಂಡ ಇಂಗ್ಲೆಂಡ್ಗೆ ಸರಣಿ ಜಯದ ಖುಷಿ