ಇಸ್ಲಾಮಾಬಾದ್ : ಪಾಕಿಸ್ತಾನ ತಂಡದ ಅಟಗಾರರಿಗೆ ಇಂಗ್ಲಿಷ್ ಬರುವುದಿಲ್ಲವೆನ್ನುವ ಮಾತನ್ನು ಹಾಸ್ಯಕ್ಕೆ ಬಳಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿಕೊಂಡಿದೆ. ಕೆಲವು ಆಟಗಾರರು ಚೆನ್ನಾಗಿ ಆಂಗ್ಲ ಭಾಷೆ ಮಾತನಾಡುತ್ತಾರೆ. ಇಷ್ಟಾಗಿಯೂ ಆಟಗಾರರು ಇಂಗ್ಲಿಷ್‌ನಲ್ಲಿ ಪ್ರಶ್ನೆಗಳು ಎದುರಾದಾಗ ಹೆದರುವುದುಂಟು ಅಂಥದ್ದೊಂದು ಪರಿಸ್ಥಿತಿ ಪ್ರವಾಸಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ಸರಣಿಯ ಮೊದಲು ನಡೆದಿದೆ. ಈ ಬಾರಿ ಇಕ್ಕಟ್ಟಿಗೆ ಸಿಲುಕಿದ್ದ ವೇಗದ ಬೌಲರ್ (Pakistan Bowler) ನಾಸಿಮ್ ಶಾ. ಅದೂ ಪತ್ರಿಕಾಗೋಷ್ಠಿಯಲ್ಲಿ.
ಸರಣಿ ಹಿನ್ನೆಲೆಯಲ್ಲಿ ವೇಗಿ ನಾಸಿಮ್ ಶಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಬಂದಿದ್ದರು. ಅವರು ಬಹುತೇಕ ಪ್ರಶ್ನೆಗಳಿಗೆ ಉರ್ದು ಭಾಷೆಯಲ್ಲಿಯೇ ಉತ್ತರ ಕೊಡುತ್ತಿದ್ದರು. ಏತನ್ಮಧ್ಯೆ, ಇಂಗ್ಲಿಷ್ ಪತ್ರಕರ್ತರೊಬ್ಬರು ಇಂಗ್ಲೆಂಡ್‌ನ ದಿಗ್ಗಜ ಬೌಲರ್ ಜೇಮ್ಸ್ ಆಂಡರ್ಸನ್ ಕ್ರಿಕೆಟ್ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಪ್ರಶ್ನೆ ಕೇಳಿದ್ದಾರೆ.
ಯುವ ಬೌಲರ್ ನಾಸಿಮ್ ಶಾ ಅವರು ಅದಕ್ಕೆ ಇಂಗ್ಲಿಷ್‌ನಲ್ಲೇ ಉತ್ತರ ಕೊಟ್ಟಿದ್ದಾರೆ. “ಅವರದ್ದು ದೊಡ್ಡ ಸಾಧನೆ. ನಾನೊಬ್ಬ ವೇಗದ ಬೌಲರ್ ಆಗಿ ಹೇಳಬಲ್ಲೆ, ದೀರ್ಘ ಕಾಲ ವೇಗದ ಬೌಲಿಂಗ್ ಮಾಡುವುದು ಸುಲಭವಲ್ಲ. ಅವರೊಬ್ಬ ಲೆಜೆಂಡ್. ಅವರನ್ನು ಪ್ರತಿ ಬಾರಿ ಭೇಟಿ ಮಾಡಿದಾಗಲೂ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ. ೪೦ ವರ್ಷವಾದರೂ ಫಿಟ್ ಆಗಿ ವೇಗದ ಬೌಲಿಂಗ್ ಮಾಡುವುದು ಸಾಧನೆಯೇ ಸರಿ,” ಎಂಬುದಾಗಿ ಹೇಳಿದ್ದಾರೆ.
ಅಷ್ಟಕ್ಕೆ ಸಮಾಧಾನಗೊಳ್ಳದ ಇಂಗ್ಲೆಂಡ್ ಪತ್ರಕರ್ತ, ಅವರ ಬಗ್ಗೆ ಇನ್ನೇನಾದರೂ ಹೇಳಿ ಎಂದು ಪ್ರಶ್ನಿಸಿದ್ದಾರೆ. ತಕ್ಷಣ ಅವರು “ನನ್ನಲ್ಲಿರುವುದು ಶೇಕಡಾ ೩೦ ಇಂಗ್ಲಿಷ್. ಅದು ಮುಗಿದಿದೆ. ಸರಿಯಾ? ಎಂದು ನಾಸಿಮ್ ಉತ್ತರ ಕೊಟ್ಟಿದ್ದಾರೆ. ತಕ್ಷಣ ಅಲ್ಲಿದ್ದವರೆಲ್ಲರೂ ಜೋರಾಗಿ ನಗಾಡಿದ್ದಾರೆ.
ಇದನ್ನೂ ಓದಿ | Autobiography | ರಮೀಜ್ ರಾಜಾ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು, ಯಾಕೆಂದರೆ ಅವರಪ್ಪ ಪೊಲೀಸ್ ಕಮಿಷನರ್!