ಶಾರ್ಜಾ: ಅನುಭವಿ ಮೊಹಮ್ಮದ್ ನಬಿ(Mohammad Nabi) ಅವರ ಆಲ್ರೌಂಡರ್ ಆಟದ ನೆರವಿನಿಂದ ಪಾಕಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಆರು ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿತು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊಟ್ಟ ಮೊದಲ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದೆ.
ಶುಕ್ರವಾರ ರಾತ್ರಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ ಕೇವಲ 92 ರನ್ ಗಳಿಸಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಅಫಘಾನಿಸ್ತಾನ 17.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಉತ್ಕೃಷ್ಟ ಮಟ್ಟದ ಬೌಲಿಂಗ್ ಪ್ರದರ್ಶನ ತೋರಿದ ಫಜಲ್ಹಕ್ ಫಾರೂಕಿ(Fazalhaq Farooqi), ಮುಜೀಬ್ ಮತ್ತು ಮೊಹಮ್ಮದ್ ನಬಿ ತಲಾ 2 ವಿಕೆಟ್ ಪಡೆದು ಮಿಂಚಿದರು. ಇದರಲ್ಲಿ ಫಾರೂಕಿ ಅವರ ಬೌಲಿಂಗ್ ತುಂಬಾನೆ ಘಾತಕವಾಗಿತ್ತು. 4 ಓವರ್ ಬೌಲಿಂಗ್ ಮಾಡಿದ ಅವರು ಕೇವಲ 13 ರನ್ ಬಿಟ್ಟುಕೊಟ್ಟು ಮಿಂಚಿದರು. ಪಾಕಿಸ್ತಾನದ ಪರ ಸೈಮ್ ಆಯುಬ್ (17), ತಯಾಬ್ ತಾಹೀರ್ (16), ಇಮಾದ್ ವಸೀಮ್ (18) ಹಾಗೂ ಶದಾಬ್ ಖಾನ್ (12) ಅವರನ್ನು ಹೊರತುಪಡಿಸಿ ಇನ್ನುಳಿದ ಆಟಗಾರರು ಎರಡಂಕಿ ವೈಯಕ್ತಿಕ ಮೊತ್ತವನ್ನು ಗಳಿಸುವಲ್ಲಿ ವಿಫಲರಾದರು.
ಪಾಕಿಸ್ತಾನದ ಪ್ರಮುಖ ಆಟಗಾರರಾದ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಸೇರಿ ಹಲವು ಸೀನಿಯರ್ ಆಟಗಾರರು ಈ ಪಂದ್ಯದಲ್ಲಿ ಆಡಿಲ್ಲ. ಇದು ಪಾಕ್ ಬಿ ತಂಡವಾಗಿದೆ. ಒಟ್ಟಾರೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಅಫಘಾನಿಸ್ತಾನ ತಂಡ ಪಾಕ್ ವಿರುದ್ಧ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದು ಸಂಭ್ರಮಿಸಿತು. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಪಾಕ್ ಒಂದು ರನ್ ಸೋಲು ಕಂಡು ಅವಮಾನ ಎದುರಿಸಿತ್ತು.