ಚೆನ್ನೈ: ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಆ ಬಳಿಕ ಸೋಲಿನ ಹಾದಿ ಹಿಡಿದಿರುವ ಪಾಕಿಸ್ತಾನ(Pakistan vs Afghanistan) ಮತ್ತು ಅಫಘಾನಿಸ್ತಾನ ಸೋಮವಾರ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಇತ್ತಂಡಗಳ ಈ ಕಾದಾಟ ಚೆನ್ನೈಯ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಾಕಿಸ್ತಾನ ಸದ್ಯ ಆಡಿದ ನಾಲ್ಕು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆದ್ದ 4 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿಯೂ ಸೋಲು ಕಂಡರೆ ಸೆಮಿಫೈನಲ್ ಹಾದಿ ದುರ್ಗಮಗೊಳ್ಳಲಿದೆ. ಹೀಗಾಗಿ ಪಾಕ್ಗೆ ಈ ಪಂದ್ಯದಲ್ಲಿ ಗೆಲ್ಲಲ್ಲೇ ಬೇಕಾದ ಒತ್ತಡವಿದೆ. ಪಾಕ್ ಪರ ನಾಯಕ ಬಾಬರ್ ಅಜಂ ಮತ್ತು ಇಮಾಮ್ ಉಲ್ ಹಕ್ ಅವರು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲವಾಗುತ್ತಿರುವುದು ತಂಡದ ಹಿನ್ನಡೆಗೆ ಪ್ರಮುಖ ಕಾರಣ. ಪ್ರತಿ ಪಂದ್ಯದಲ್ಲೂ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಮಾತ್ರ ಏಕಾಂಗಿಯಾಗಿ ಹೋರಾಡುತ್ತಿದ್ದಾರೆ.
ಅಫಘಾನಿಸ್ತಾನಕ್ಕೆ ಸೇಡಿನ ಪಂದ್ಯ
ಇಂಗ್ಲೆಂಡ್ ತಂಡವನ್ನು ಮಗುಚಿದ ಹಾಕಿ ಆತ್ಮ ವಿಶ್ವಾಸ ನೋಡುವಾಗ ಅಫಘಾನಿಸ್ತಾನ ಗೆಲುವಿನ ಹಳಿ ಏರಬಹುದು ಎಂದು ಊಹಿಸಲಾಗಿತ್ತು. ಆದರೆ ಬಲಿಷ್ಠ ನ್ಯೂಜಿಲ್ಯಾಂಡ್ ವಿರುದ್ಧ ಮುಂದಿನ ಪಂದ್ಯದಲ್ಲಿ ಸೋಲು ಕಂಡಿತ್ತು. ಆದರೆ ಪಾಕ್ ವಿರುದ್ಧ ಆಫ್ಘನ್ಗೆ ಸೇಡಿನ ಪಂದ್ಯ. ಭಾರತಕ್ಕೆ ಹೇಗೆ ಪಾಕಿಸ್ತಾನ ಬದ್ಧ ಎದುರಾಳಿಯೋ ಹಾಗೆ ಕ್ರಿಕೆಟ್ನಲ್ಲಿ ಆಫ್ಘನ್ಗೆ ಪಾಕ್ ಬುದ್ಧ ಎದುರಾಳಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸೋಲು ಕಾಣುತ್ತಿದ್ದಂತೆ ಅಫಘಾನಿಸ್ತಾನ ಅಭಿಮಾನಿಗಳು ಪಾಕ್ನ ಸೋಲನ್ನು ಸಂಭ್ರಮಿಸಿದ್ದರು. ಹೀಗಾಗಿ ಈ ಪ್ರತಿಷ್ಠೆಯ ಪಂದ್ಯದಲ್ಲಿ ಹೇಗಾದರೂ ಮಾಡಿ ಪಾಕ್ ಮಣಿಸಲೇ ಬೇಕು ಎಂಬ ಪಣತೊಟ್ಟಿದೆ ಆಫ್ಘನ್ ತಂಡ. ಸ್ವಿಂಗ್ ಬೌಲರ್ ನವೀನ್ ಉಲ್ ಹಕ್ ಕೂಡ ಘಾತಕ ಸ್ಫೆಲ್ ನಡೆಸಬಲ್ಲರು. ಬ್ಯಾಟಿಂಗ್ ಕೂಡ ಉತ್ತಮವಾಗಿದೆ. 21 ವರ್ಷದ ಯುವ ಆಟಗಾರ ರೆಹಮಾನುಲ್ಲ ಗುರ್ಬಜ್ ಮತ್ತು ಇಬ್ರಾಹಿಂ ಜದ್ರಾನ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಉತ್ತಮ ಆರಂಭ ಒದಗಿಸಬಲ್ಲರು.
ಪಿಚ್ ರಿಪೋರ್ಟ್
ಚೆನ್ನೈಯ ಚಿದಂಬರಂ ಸ್ಟೇಡಿಯಂನ ಪಿಚ್ ಸಂಪೂರ್ಣ ಸ್ಪಿನ್ ಸ್ನೇಹಿಯಾಗಿದೆ. ಹೀಗಾಗಿ ಆಫ್ಘನ್ ಇದರ ಸಂಪೂರ್ಣ ಲಾಭವೆತ್ತುವ ಸಾಧ್ಯತೆ ಇದೆ. ಏಕೆಂದರೆ ಈ ತಂಡದಲ್ಲಿ ತ್ರಿವಳಿ ಸ್ಪಿನ್ನರ್ಗಳಿದ್ದಾರೆ. ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್ ಮತ್ತು ಮೊಹಮ್ಮದ್ ನಬೀ ಈ ಸ್ಪಿನ್ನರ್ಗಳು. ಇವರೆಲ್ಲ ಸ್ಪಿನ್ನ್ ಮೋಡಿ ಮಾಡಿದರೆ ಪಾಕ್ಗೆ ಸೋಲು ಖಚಿತ. ಪಾಕ್ ತಂಡದಲ್ಲಿ ವಿಕೆಟ್ ಕೀಳಬಲ್ಲ ಸ್ಪಿನ್ ಬೌಲರ್ಗಳಿಲ್ಲ. ಕೇವಲ ವೇಗಿಗಳೇ ಇವರ ಪ್ರಮುಖ ಅಸ್ತ್ರ.
ಇದನ್ನೂ ಓದಿ IND vs NZ: ವಿಶ್ವಕಪ್ನಲ್ಲಿ ಅನಿಲ್ ಕುಂಬ್ಳೆ ದಾಖಲೆ ಮುರಿದ ಮೊಹಮ್ಮದ್ ಶಮಿ
ಹವಾಮಾನ ವರದಿ
ಚೆನ್ನೈಯಲ್ಲಿ ಮಧ್ಯಾಹ್ನದ ತಾಪಮಾನವು ಸುಮಾರು 33 ಡಿಗ್ರಿಗಳಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆಯ ವೇಳೆ ಸ್ವಲ್ಪ ಮೋಡ ಕವಿದ ವಾತಾವರಣವಿದ್ದರೂ ತಾಪ ಅಧಿಕವಾಗಿಯೇ ಇರಲಿದೆ. ಮಳೆಯ ಯಾವುದೇ ಸಾಧ್ಯತೆ ಇಲ್ಲ ಆದರೆ, ಇಬ್ಬನಿ ಸಮಸ್ಯೆ ಖಚಿತ ಎಂದು ತಿಳಿಸಿದೆ.
ಸಂಭಾವ್ಯ ತಂಡ
ಅಫಘಾನಿಸ್ತಾನ: ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.
ಪಾಕಿಸ್ತಾನ: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್.