ಅಡಿಲೇಡ್: ಟಿ20 ವಿಶ್ವ ಕಪ್ನ ಆರಂಭಿಕ ಎರಡು ಪಂದ್ಯದಲ್ಲಿ ಹಿನಾಯವಾಗಿ ಸೋತು ಕೂಟದಿಂದಲೇ ಹೊರ ಬೀಳುವ ಸ್ಥಿತಿಯಲ್ಲಿದ್ದ ಪಾಕಿಸ್ತಾನ(PAK VS BANGLA) ತಂಡ ಯಾರು ಊಹಿಸದ ರೀತಿಯಲ್ಲಿ ಅಚ್ಚರಿ ಎಂಬಂತೆ ಸೆಮಿಫೈನಲ್ ಪ್ರವೇಶಿಸಿದೆ. ಬಾಂಗ್ಲಾ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿ ಬಿ ಗ್ರೂಪ್ನಿಂದ ದ್ವಿತೀಯ ಸ್ಥಾನಿಯಾಗಿ ಬಾಬರ್ ಅಜಂ ಪಡೆ ಸೆಮಿ ಅವಕಾಶ ಗಿಟ್ಟಿಸಿಕೊಂಡಿತು. ಬಾಂಗ್ಲಾ ಈ ಸೋಲಿನೊಂದಿಗೆ ಕೂಟದಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 13 ರನ್ ಸೋಲಿನಿಂದ ಕೂಟದಿಂದ ನಿರ್ಗಮಿಸಿತ್ತು.
ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾನುವಾರದ ಸೂಪರ್-12 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 127 ರನ್ ಗಳಿಸಿತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಪಾಕಿಸ್ತಾನ 18.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 128 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಗರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್(32) ನಾಯಕ ಬಾಬರ್ ಅಜಂ(25) ಮೊದಲ ವಿಕೆಟ್ಗೆ 57 ರನ್ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ನಿರ್ಮಿಸಿದರು. ಈ ಜೋಡಿಯ ವಿಕೆಟ್ ಪತನದ ಬಳಿಕ ಆಡಲಿಳಿದ ಮಹಮ್ಮದ್ ಹ್ಯಾರಿಸ್(31) ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೆಮಿ ಫೈನಲ್ಗೇರುವ ಅವಕಾಶದೊಂದಿಗೆ ಆಡಲಿಳಿದ ಬಾಂಗ್ಲಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿತು. ಅದರಂತೆ ತಂಡದ ಆರಂಭಿಕ ಆಟಗಾರ ಶಂಟೊ ಆಕರ್ಷಕ ಅರ್ಧಶತಕ ಸಿಡಿಸಿ ಉತ್ತಮ ಆರಂಭ ನೀಡಿದರು. ಆದರೆ ಈ ವಿಕೆಟ್ ಪತನದ ಬಳಿಕ ಬಾಂಗ್ಲಾ ತಂಡ ನಾಟಕೀಯ ಕುಸಿತ ಕಂಡಿತು. ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಕೈಚೆಲ್ಲಿದರು. ಇದರಿಂದ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಹಿನ್ನಡೆ ಅನುಭವಿಸಿ ಸೋಲಿಗೆ ತುತ್ತಾಯಿತು. ಮಧ್ಯಮ ಕ್ರಮಾಂಕದಲ್ಲಿ ಆಫೀಫ್ ಹೊಸೈನ್(ಅಜೇಯ 24) ಸಣ್ಣ ಹೋರಾಟವನ್ನು ನಡೆಸಿದರೂ ಅವರಿಗೆ ಯಾರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಆರಂಭಿಕ ಆಟಗಾರ ಶಂಟೊ 48 ಎಸೆತದಲ್ಲಿ 54 ರನ್ ಸಿಡಿಸಿದರು. ಈ ಇನಿಂಗ್ಸ್ ವೇಳೆ 7 ಬೌಂಡರಿ ದಾಖಲಾಯಿತು. ಪಾಕಿಸ್ತಾನ ಪರ ಶಾಹಿನ್ ಅಫ್ರಿದಿ 4 ಓವರ್ಗೆ 22 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ: 20 ಓವರ್ಗಳಲ್ಲಿ 8 ವಿಕೆಟ್ಗೆ 127(ಶಂಟೊ 54,ಆಫೀಫ್ ಹೊಸೈನ್ ಅಜೇಯ 24, ಶಾಹಿನ್ ಅಫ್ರಿದಿ 22ಕ್ಕೆ 4, ಶಾದಾಬ್ ಖಾನ್ 30ಕ್ಕೆ2)
ಪಾಕಿಸ್ತಾನ: 18.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 128( ರಿಜ್ವಾನ್ 32, ಮಹಮ್ಮದ್ ಹ್ಯಾರಿಸ್ 31, ನಸುಮ್ ಅಹ್ಮದ್ 14ಕ್ಕೆ 1)
ಇದನ್ನೂ ಓದಿ | T20 World Cup | ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಸೋಲು; ಸೆಮಿಫೈನಲ್ ಪ್ರವೇಶಿಸಿದ ಭಾರತ