ಲಂಡನ್: ಕಳೆದ ಸೆಪ್ಟೆಂಬರ್‌ನಲ್ಲಿ 7 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಸಲುವಾಗಿ ಇಂಗ್ಲೆಂಡ್(PAK VS ENG) ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಒದಗಿಸಿದ್ದ ಆಹಾರದ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಹೀಗಾಗಿ ಎಚ್ಚೆತ್ತುಕೊಂಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ಬಾರಿ ಪಾಕಿಸ್ತಾನ ಪ್ರವಾಸದ ವೇಳೆ ತಂಡದ ಜತೆಗೆ ಜತೆಗೆ ಬಾಣಸಿಗನನ್ನೂ (ಶೆಫ್) ಕಳುಹಿಸಿ ಕೊಡಲು ಮುಂದಾಗಿದೆ ಎಂದು ವರದಿಯಾಗಿದೆ.
ಕಳೆದ ಪಾಕಿಸ್ತಾನ ಪ್ರವಾಸದ ವೇಳೆ ಇಂಗ್ಲೆಂಡ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪಾಕ್ ಕ್ರಿಕೆಟ್ ಮಂಡಳಿ ತಮಗೆ ನೀಡಿದ್ದ ಆಹಾರವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂದು ಫೀಡ್ ಬ್ಯಾಕ್ ನೀಡಿದ್ದರು. ಅಲ್ಲದೆ ಪಾಕಿಸ್ತಾನ ಸರಣಿಯ ವೇಳೆ ಕೆಲವು ಇಂಗ್ಲೆಂಡ್ ಆಟಗಾರರು ಹೊಟ್ಟೆ ನೋವಿನಿಂದ ಬಳಲಿದ್ದರು. ಹೀಗಾಗಿ ಈ ಬಾರಿ ಟೆಸ್ಟ್ ಸರಣಿಗೆ ಹೋಗುವಾಗ ತಾವೇ ಬಾಣಸಿಗರನ್ನು ಕರೆದುಕೊಂಡು ಹೋಗುವುದಾಗಿ ಇಂಗ್ಲೆಂಡ್ ತಂಡ ತಿಳಿಸಿದೆ.
2018 ರ ಫಿಫಾ ವಿಶ್ವಕಪ್ ಮತ್ತು ಯುರೋ ಕಪ್ 2020ರ ಸಮಯದಲ್ಲಿ ಇಂಗ್ಲೆಂಡ್ ಪುರುಷರ ಫುಟ್ಬಾಲ್ ತಂಡದೊಂದಿಗೆ ಕೆಲಸ ಮಾಡಿದ ಒಮರ್ ಮೆಜಿಯಾನೆ ಇಂಗ್ಲೆಂಡ್ ಟೆಸ್ಟ್ ತಂಡದ ಬಾಣಸಿಗರಾಗಿರುತ್ತಾರೆ ಎಂದು ವರದಿ ತಿಳಿಸಿದೆ. ಇದೇ ಮೊದಲ ಬಾರಿಗೆ ದೇಶದ ಹೊರಗಿನ ಪ್ರವಾಸಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತಂಡದೊಂದಿಗೆ ವಿಶೇಷ ಬಾಣಸಿಗನನ್ನು ಕರೆದುಕೊಂಡು ಹೋಗುತ್ತಿದೆ.
ಐಸಿಸಿ ಟೆಸ್ಟ್ ವಿಶ್ವಚಾಂಪಿಯನ್‌ಷಿಪ್ ಟೂರ್ನಿಯ ಎರಡನೇ ಆವೃತ್ತಿಯ ಭಾಗವಾಗಿ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು, ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ಡಿಸೆಂಬರ್ 1ರಂದು ಆರಂಭವಾಗಲಿದೆ. ಈ ಮೂಲಕ ಬರೋಬ್ಬರಿ 18 ವರ್ಷಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡ ಪಾಕಿಸ್ತಾನಕ್ಕೆ ಕಾಲಿಡಲಿದೆ.
ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ