ಕೋಲ್ಕೊತಾ: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ರೇಸ್ನಿಂದ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ(PAK vs ENG) ತಂಡ ತನ್ನ ಕೊನೆಯ ಪ್ರಯತ್ನದಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಸೆಮಿಗೆ ಪ್ರವೇಶ ಪಡೆಯಬೇಕಿದ್ದರೆ ಪವಾಡ ಸಂಭವಿಸಿದಂತೆ ಫಲಿತಾಂಶ ದಾಖಲಾಗಬೇಕಿದೆ. ಆದರೆ ಪಾಕ್ ನಾಯಕ ಬಾಬರ್ ಅಜಂ ನಾವು ಸೆಮಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬರ್ ಅಜಂ, “ಎಲ್ಲರು ನಮ್ಮ ತಂಡ ಸೆಮಿಫೈನಲ್ನಿಂದ ಹೊರಬಿದ್ದಿದ್ದೇವೆ ಎಂದು ಗೇಲಿ ಮಾಡುತ್ತಿದ್ದಾರೆ. ಆದರೆ ನಾವು ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಖಂಡಿತವಾಗಿಯೂ ನಾವು ಸೆಮಿ ಪ್ರವೇಶದ ಬಗ್ಗೆ ಈಗಾಗಲೇ ಕಾರ್ಯತಂತ್ರವನ್ನು ರೂಪಿಸಿದ್ದೇವೆ” ಎಂದರು.
ಬಾಬರ್ ಕಾರ್ಯತಂತ್ರವೇನು?
ರನ್ರೇಟ್ ಮೇಲೆ ನಾವು ಹೆಚ್ಚು ಗಮನ ಹರಿಸಿದ್ದೇವೆ. ಫಖಾರ್ ಜಮಾನ್ ಅವರು 20 ರಿಂದ 30 ಓವರ್ ಕ್ರೀಸ್ ಆಕ್ರಮಿಸಲು ನಾವು ಅವರಿಗೆ ಹೇಳಿದ್ದೇವೆ. ಅವರು ನಮ್ಮ ಬೇಡಿಕೆಯಂತೆ ಇಚ್ಟು ಹೊತ್ತು ಬ್ಯಾಟಿಂಗ್ ನಡೆಸಿದರೆ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ಯಾವುದೇ ಅನುಮಾನ ಬೇಡ. ಏಕೆಂದರೆ ಅವರು ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ನಮ್ಮ ಎಲ್ಲ ಆಟಗಾರು ಆಂಗ್ಲರ ವಿರುದ್ಧ ಬಿರುಸಿನ ಆಟಕ್ಕೆ ಒತ್ತು ನೀಡಿದ್ದೇವೆ ಎಂದರು.
ಏನು ಬೇಕಾದರೂ ಸಂಭವಿಸಬಹುದು
ಕ್ರಿಕೆಟ್ನಲ್ಲಿ ಏನು ಬೇಕಾದರು ಸಂಭವಿಸಬಹುದು. ಇದಕ್ಕೆ ಕಳೆದ ಅಫಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವೇ ಸಾಕ್ಷಿ. ಆಸ್ಟ್ರೇಲಿಯಾ 90 ರನ್ಗೆ 7 ವಿಕೆಟ್ ಕಳೆದುಕೊಂಡಾಗ ಗೆಲುವಿನ ಸಾಧ್ಯತೆ ಕೇವಲ ಶೇ.6ರಷ್ಟು ಇತ್ತು. ಅಫಫಾನಿಸ್ತಾನ 96 ಶೇ. ಗೆಲುವಿನ ಪ್ರತಿಶತ ಹೊಂದಿತ್ತು. ಆದರೆ ಕೊನೆಗೆ ಗೆಲುವು ಸಾಧಿಸಿದ್ದು ಆಸ್ಟ್ರೇಲಿಯಾ. ಗ್ಲೆನ್ ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಹೋರಾಡಿ ಅಜೇಯ ದ್ವಿಶತಕದ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅವರ ಈ ಆಟವನ್ನೇ ನಮ್ಮ ತಂಡ ಸ್ಫೂರ್ತಿಯಾಗಿ ತೆಗೆದುಕೊಂಡು ಇಂಗ್ಲೆಂಡ್ ವಿರುದ್ಧ ಅಚ್ಚರಿಯ ಫಲಿತಾಂಶ ದಾಖಲಿ ಸೆಮಿ ಫೈನಲ್ ಪ್ರವೇಶಿಸಲಿದ್ದೇವೆ ಎಂದು ಬಾಬರ್ ಆತ್ಮವಿಶ್ವಾಸದಿಂದ ಹೇಳಿದರು.
ಇದನ್ನೂ ಓದಿ Babar Azam: ಭಾರತದಿಂದ ಅಪಾರವಾದ ಪ್ರೀತಿ ಸಿಕ್ಕಿದೆ ಎಂದ ಪಾಕ್ ನಾಯಕ ಬಾಬರ್ ಅಜಂ
ಮೊದಲು ಬ್ಯಾಟಿಂಗ್ ನಡೆಸಿ 300 ರನ್ ಬಾರಿಸಬೇಕು
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಂ ಪಡೆ ಮೊದಲು ಬ್ಯಾಟಿಂಗ್ ನಡೆಸಿ ಮಾಡಿ 300 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು ಕೇವಲ 13 ರನ್‌ಗಳಿಗೆ ಆಲ್‌ಔಟ್ ಮಾಡಬೇಕು. ಆ ಮೂಲಕ ಪಾಕಿಸ್ತಾನ 287 ರನ್‌ಗಳ ಭಾರಿ ಅಂತರದಲ್ಲಿ ಗೆಲುವು ಪಡೆಯಬೇಕು. ಆಗ ಮಾತ್ರ ಪಾಕಿಸ್ತಾನ ಉತ್ತಮ ರನ್ ರೇಟ್ ಸಾಧಿಸಿ ಕಿವೀಸ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು.
ಬೌಲಿಂಗ್ ಆಯ್ಕೆ ಸಿಕ್ಕರೆ
ಒಂದೊಮ್ಮೆ ಪಾಕಿಸ್ತಾನ ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ನಡಸುವ ಸನ್ನಿವೇಶ ಎದುರಾದರೆ ಇಂಗ್ಲೆಂಡ್ ತಂಡವನ್ನು ಕೇವಲ 100 ರನ್‌ಗಳಿಗೆ ಆಲ್‌ಔಟ್ ಮಾಡಬೇಕು. ಬಳಿಕ ಪಾಕ್ ಈ ಮೊತ್ತವನ್ನು ಕೇವಲ 2.5 ಓವರ್‌ಗಳಿಗೆ ಚೇಸ್ ಮಾಡಬೇಕು. ಆ ಮೂಲಕ 283 ಎಸೆತಗಳು ಬಾಕಿ ಇರುವಾಗಲೇ ಪಾಕ್ ಪಂದ್ಯವನ್ನು ಗೆಲ್ಲಬೇಕು. ಇದು ಸಾಧ್ಯವಾಗದೇ ಇದ್ದರೆ ಪಾಕ್ ವಿಶ್ವಕಪ್ ಅಭಿಯಾನ ಕೊನೆಗೊಳ್ಳುತ್ತದೆ.