ಮೆಲ್ಬೋರ್ನ್: ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವ ಕಪ್ ಫೈನಲ್ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್(PAK VS ENG ) ತಂಡಗಳು ಈ ಕಾದಾಟದಲ್ಲಿ ಮುಖಾಮುಖಿಯಾಗಲಿದ್ದು ಭಾನುವಾರ ಮೆಲ್ಬೋರ್ನ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ.
ಆರಂಭದದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತು ಬಹುತೇಕ ಕೂಟದಿಂದ ಹೊರಬಿದ್ದಂತಿದ್ದ ಪಾಕಿಸ್ತಾನ ಬಳಿಕ ಗೆಲುವು ಮತ್ತು ಅದೃಷ್ಟದ ಬಲದಿಂದ ಫಿನಿಕ್ಸ್ನಂತೆ ಎದ್ದು ಬಂದು ಫೈನಲ್ ತಲುಪಿದ ಕತೆಯೇ ರೋಚಕ ಇದೀಗ ಫೈನಲ್ನಲ್ಲಿಯೂ ಪಾಕ್ಗೆ ಈ ಅದೃಷ್ಟ ಕೈ ಹಿಡಿಯಲಿದೆಯಾ ಎಂದು ಕಾದು ನೋಡಬೇಕಿದೆ. ಇನ್ನೊಂದೆಡೆ ಏಕ ದಿನ ಚಾಂಪಿಯನ್ ಇಂಗ್ಲೆಂಡ್ ತಂಡ ಈ ಪ್ರಶಸ್ತಿಯನ್ನೂ ಗೆದ್ದು ಕ್ರಿಕೆಟ್ ಜಗತ್ತಿಗೆ ಸಾಮಾಟ್ರನಾಗುವ ಇರಾದೆಯಲ್ಲಿದೆ.
ಉಭಯ ತಂಡಗಳು ಬಲಿಷ್ಠ
ಬಲಾಬಲದ ಲೆಕ್ಕಾಚಾರದಲ್ಲಿ ಇತ್ತಂಡಗಳು ಬಲಿಷ್ಠವಾಗಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗ ಸಮರ್ಥವಾಗಿದೆ. ಆದರೆ ಉಭಯ ತಂಡಗಳು ಒಮ್ಮೆ 200ರ ಗಡಿ ದಾಟಿ ಮತ್ತೊಮ್ಮೆ ನೂರರೊಳಗೆ ಗಂಟು ಮೂಟೆ ಕಟ್ಟಿದ ನಿದರ್ಶನವೂ ಇರುವುದರಿಂದ ಹೆಚ್ಚಾಗಿ ಈ ತಂಡಗಳ ಪ್ರದರ್ಶವನ್ನು ನಂಬುವಂತಿಲ್ಲ.
ಬ್ಯಾಟಿಂಗ್ ಫಾರ್ಮ್ ಕಂಡುಕೊಂಡ ಬಾಬರ್
ಟೂರ್ನಿಯ ಆರಂಭಿಕ ಪಂದ್ಯದಿಂದ ಹಿಡಿದು ತಂಡ ಸೆಮಿಫೈನಲ್ ಪ್ರವೇಶ ಪಡೆಯುವ ಪಂದ್ಯದವರೆಗೆ ನಾಯಕ ಬಾಬರ್ ಅಜಂ ಎರಡಂಕಿ ಮೊತ್ತ ಕಲೆಹಾಕುವಲ್ಲಿ ವೈಫಲ್ಯ ಕಂಡಿದ್ದರು. ಜತೆಗೆ ಪಾಕ್ ಮಾಜಿ ಆಟಗಾರರ ಟೀಕೆಗೂ ಗುರಿಯಾಗಿದ್ದರು. ಆದರೆ ಮಹತ್ವ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಬಾಬರ್ ಅವರು ಬ್ಯಾಟಿಂಗ್ ಫಾರ್ಮ್ಗೆ ಮರಳಿರುವುದರಿಂದ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಉಳಿದಂತೆ ರಿಜ್ವಾನ್ ಮತ್ತು ಶಾದಾಬ್ ಖಾನ್ ಅವರ ಆಲ್ರೌಂಡರ್ ಆಟವೂ ತಂಡಕ್ಕೆ ಪ್ಲಸ್ ಪಾಯಿಂಟ್ ಎನ್ನಲಡಿಯಿಲ್ಲ. ಆದರೆ ಪಾಕಿಸ್ತಾನದ ವೀಕ್ನೆಸ್ ಎಂದರೆ ಫೀಲ್ಡಿಂಗ್. ಹಲವು ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿ ಪಂದ್ಯ ಸೋತ ನಿದರ್ಶನ ಹಲವಾರಿದೆ. ಈ ನಿಟ್ಟಿನಲ್ಲಿ ಪಾಕ್ ಕ್ಷೇತ್ರ ರಕ್ಷಣೆ ತಂಡಕ್ಕೆ ಹಿನ್ನಡೆಯಾದರೂ ಅಚ್ಚರಿಯಿಲ್ಲ.
ಡೇಂಜರಸ್ ಅಫ್ರಿದಿ
ಪಾಕಿಸ್ತಾನದ ವೇಗಿ ಶಾಹಿನ್ ಅಫ್ರಿದಿ ತಮ್ಮ ಮಾರಕ ಯಾರ್ಕರ್ ಮೂಲಕ ಮೊದಲ ಓವರ್ನಲ್ಲಿಯೇ ಎದುರಾಳಿ ತಂಡದ ವಿಕೆಟ್ ಕೀಳುವುದರಲ್ಲಿ ಎತ್ತಿದ ಕೈ. ಅದರಲ್ಲೂ ಹೊಸ ಚೆಂಡಿನಲ್ಲಿ ಅವರ ಬೌಲಿಂಗ್ ತುಂಬಾನೆ ಘಾತಕ. ಆದ್ದರಿಂದ ಎದುರಾಳಿ ಬ್ಯಾಟರ್ಗಳು ಇವರ ಓವರ್ನಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಉಳಿದಂತೆ ಯುವ ವೇಗಿ ನೀಶಮ್ ಶಾ ಕೂಡ ಉತ್ತಮ ಲಯದಲ್ಲಿರುವುದರಿಂದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.
ಇಂಗ್ಲೆಂಡ್ ಸಮರ್ಥ ತಂಡ
ಪಾಕಿಸ್ತಾನ ತಂಡಕ್ಕೆ ಹೋಲಿಸಿದರೆ ಇಂಗ್ಲೆಂಡ್ ತಂಡ ಸಮರ್ಥವಾಗಿ ಗೋಚರಿಸಿದೆ ಇದಕ್ಕೆ ಕಳೆದ ಭಾರತ ಎದುರಿನ ಸೆಮಿಫೈನಲ್ ಪಂದ್ಯವೇ ಉತ್ತಮ ಸಾಕ್ಷಿ. ಬೌಲಿಂಗ್,ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ವಿಭಾದಲ್ಲಿ ಮಿಂಚಿದ ಆಂಗ್ಲರು ಭರ್ಜರಿ 10 ವಿಕೆಟ್ಗಳಿಂದ ರೋಹಿತ್ ಪಡೆಯನ್ನು ಮಗುಚಿ ಫೈನಲ್ ಪ್ರವೇಶಿಸಿದ್ದರು. ಜಾಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಅವರನ್ನೊಳಗೊಂಡ ಬ್ಯಾಟಿಂಗ್ ವಿಭಾಗ ತುಂಬಾ ಬಲಿಷ್ಠವಾಗಿ ಗೋಚರಿಸಿದೆ ಅದರಲ್ಲೂ ಬೆನ್ ಸ್ಟೋಕ್ಸ್ ಕ್ರೀಸ್ ಕಚ್ಚಿನಿಂತರೆ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದಕ್ಕೆ 2019 ಆ್ಯಶಸ್ ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕ ದಿನ ವಿಶ್ವ ಕಪ್ ಫೈನಲ್ ಉತ್ತಮ ಸಾಕ್ಷಿ. ಸೋಲುವ ಹಂತದಲ್ಲಿದ್ದ ವೇಳೆ ಸ್ಟೋಕ್ಸ್ ತಂಡಕ್ಕೆ ಆಸರೆಯಾಗಿ ಇಂಗ್ಲೆಂಡ್ಗೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಕ್ರಿಸ್ ಜೋರ್ಡನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್ ಕೂಡ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಸಂಭಾವ್ಯ ತಂಡ
ಇಂಗ್ಲೆಂಡ್: ಜಾಸ್ ಬಟ್ಲರ್ (ನಾಯಕ), ಅಲೆಕ್ಸ್ ಹೇಲ್ಸ್, ಫಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಕ್ರಿಸ್ ಜೋರ್ಡನ್.
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಶಾನ್ ಮಸೂದ್, ಹೈದರ್ ಅಲಿ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ನಸೀಮ್ ಶಾ, ಶಾಹಿನ್ ಶಾ ಅಫ್ರಿದಿ, ಹ್ಯಾರಿಸ್ ರವೂಫ್.
ಸ್ಥಳ: ಮೆಲ್ಬೋರ್ನ್
ಪಂದ್ಯ ಆರಂಭ : ಮಧ್ಯಾಹ್ನ 01:30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಇದನ್ನೂ ಓದಿ | T20 World Cup | ಫೈನಲ್ ಪಂದ್ಯಕ್ಕೆ ಮೊದಲು ಭಾರತ ಮೂಲದ ಬಾಲಕಿಯಿಂದ ಸಂಗೀತ; ಯಾರೀಕೆ?