ಮುಲ್ತಾನ್: ಚೊಚ್ಚಲ ಏಷ್ಯಾಕಪ್(Asia Cup 2023) ಆಡಳಿಲಿದ ನೇಪಾಳ(Pakistan vs Nepal) ತಂಡ ಆರಂಭಿಕ ಹಂತದಲ್ಲಿ ಉತ್ತಮ ಹಿಡಿತ ಸಾಧಿಸಿದರೂ, ನಾಯಕ ಬಾಬರ್ ಅಜಂ(151) ಮತ್ತು ಇಫ್ತಿಕರ್ ಅಹ್ಮದ್(109*) ಬಾರಿಸಿದ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಬೃಹತ್ ಮೊತ್ತ ಕಲೆಹಾಕಿದೆ. ವಿಶ್ವದ ನಂ.1 ತಂಡದ ಖ್ಯಾತಿಗೆ ತಕ್ಕ ಪ್ರದರ್ಶನವನ್ನೇ ತೋರ್ಪಡಿಸಿ ನೇಪಾಳ ಗೆಲುವಿಗೆ ಸವಾಲಿನ ಗುರಿಯನ್ನು ನೀಡಿದೆ.
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. 25 ರನ್ ಆಗುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ಆಸರೆಯಾದ ನಾಯಕ ಬಾಬರ್ ಅಜಂ ಶತಕ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದ್ದರು. ನಿಗದಿತ 50 ಓವರ್ ಬ್ಯಾಟಿಂಗ್ ನಡೆಸಿದ ಪಾಕ್ 6 ವಿಕೆಟ್ ಕಳೆದುಕೊಂಡು 342 ರನ್ ಗಳಿಸಿದೆ. ನೇಪಾಳ ಗೆಲುವಿಗೆ 343 ರನ್ ಬಾರಿಸಬೇಕಿದೆ.
ಗಾಯದ ಮಧ್ಯೆಯೂ ಶತಕ ಬಾರಿಸಿದ ಬಾಬರ್
ದ್ವಿತೀಯ ಕ್ರಮಾಂಕದಲ್ಲಿ ಆಡಲಿಳಿದ ನಾಯಕ ಬಾಬರ್ ಅಜಂ ಆರಂಭದಲ್ಲಿ ನಿಧಾನ ಗತಿಯ ಆಟಕ್ಕೆ ಒತ್ತು ನೀಡಿದರು. ಮತ್ತೊಂದು ಬದಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಕೂಡ ಇವರಿಗೆ ಉತ್ತಮ ಸಾಥ್ ನೀಡಿದರು. ಉಭಯ ಆಟಗಾರರ ತಾಳ್ಮೆಯ ಆಟದ ನೆರವಿನಿಂದ ತಂಡ ಮೂರನೇ ವಿಕೆಟ್ಗೆ 86 ರನ್ ಒಟ್ಟುಗೂಡಿಸಿದರು. ಉತ್ತಮವಾಗಿ ಆಡುತ್ತಿದ್ದ ರಿಜ್ವಾನ್ ಸರಿಯಾದ ಸಂವಹನ ಕೊರತೆಯಿಂದಾಗಿ ರನೌಟ್ ಆದರು. ಅವರ ಗಳಿಕೆ 44. ಈ ಇನಿಂಗ್ಸ್ನಲ್ಲಿ 6 ಬೌಂಡರಿ ದಾಖಲಾಯಿತು. ಆದರೆ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತ ಬಾಬರ್ ಗಾಯದ ಮಧ್ಯೆಯೂ ಶತಕ ಬಾರಿಸಿ ಮಿಂಚಿದರು.
ಆರಂಭಿಕ ಹಂತದಲ್ಲಿ ಉತ್ತಮ ಬೌಲಿಂಗ್ ಹಿಡಿತ ಸಾಧಿಸಿದ ನೇಪಾಳ ಬೌಲರ್ಗಳು ಬಳಿಕ ನಿಧಾನವಾಗಿ ಲಯ ಕಳೆದುಕೊಂಡರು. ಬಾಬರ್ ಮತ್ತು ಇಫ್ತಿಕರ್ ಸೇರಿಕೊಂಡು ಉತ್ತಮ ಇನಿಂಗ್ಸ್ ಕಟ್ಟಿದರು. ಬಾಬರ್ ಅವರ ಕವರ್ ಡ್ರೈ ಮತ್ತು ಸಿಕ್ಸರ್ ಕಂಡು ನೇಪಾಳ ಬೌಲರ್ಗಳು ಮಂಕಾದರು. ಶತಕ ಬಾರಿಸಿದ ಬಳಿಕ ಬಾಬರ್ ತಮ್ಮ ಸೊಂಡದ ನೋವಿನ ಮಧ್ಯೆಯೂ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇದು ಬಾಬರ್ ಅವರ 19ನೇ ಏಕದಿನ ಶತಕವಾಗಿದೆ. ಒಂದೇ ಕೈಯಲ್ಲಿ ಬಾಬರ್ ಬಾರಿಸಿದ ಸಿಕ್ಸರ್ ಇದೀಗ ಎಲ್ಲಡೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಲಾರಂಭಿಸಿದೆ.
ಸ್ಫೋಟಕ ಬ್ಯಾಟಿಂಗ್ ನಡೆಸಿ ಚೊಚ್ಚಲ ಶತಕ ಬಾರಿಸಿದ ಇಫ್ತಿಕರ್
ಅಘಾ ಸಲ್ಮಾನ್ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ಹಿರಿಯ ಆಟಗಾರ ಇಫ್ತಿಕರ್ ಅಹ್ಮದ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ನೇಪಾಳ ಬೌಲರ್ಗಳ ಮೇಲೆ ಒತ್ತಡ ಹೇರಿದರು. ಪತ್ರಿ ಓವರ್ಗೂ ಸಿಕ್ಸರ್, ಬೌಂಡರಿ ಬಾರಿಸಿ ತಂಡದ ರನ್ ಗಳಿಕೆಯನ್ನು ವೇಗವಾಗಿ ಏರಿಸಿದರು. ಕೇವಲ 67 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಇದು ಅವರ ಚೊಚ್ಚಲ ಏಕದಿನ ಶತಕವಾಗಿದೆ. ಅವರ ಈ ಶತಕ ಇನಿಂಗ್ಸ್ನಲ್ಲಿ ಬರೋಬ್ಬರಿ 11 ಬೌಂಡರಿ ಮತ್ತು 4 ಸಿಕ್ಸರ್ ದಾಖಲಾಯಿತು. ಒಟ್ಟು 71 ಎಸೆತಗಳಿಂದ ಅಜೇಯ 109 ರನ್ ಬಾರಿಸಿದರು.
49 ಓವರ್ ತನಕ ಬ್ಯಾಟಿಂಗ್ ಕಾಯ್ದುಕೊಂಡ ಬಾಬರ್ ಅಜಂ 130 ಎಸೆತ ಎದುರಿಸಿ 151 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಈ ಸೊಗಸಾದ ಇನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಯಿತು. ಬಾಬರ್ ಮತ್ತು ಇಫ್ತಿಕರ್ ಸೇರಿಕೊಂಡು 214 ರನ್ಗಳನ್ನು ರಾಶಿ ಹಾಕಿದರು.