ಸಿಡ್ನಿ: ಟಿ೨೦ ವಿಶ್ವ ಕಪ್‌ನ ಆರಂಭಿಕ ಎರಡು ಪಂದ್ಯದಲ್ಲಿ ಹೀನಾಯವಾಗಿ ಸೋತು ಕೂಟದಿಂದಲೇ ಹೊರಬೀಳುವ ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡ ಅಚ್ಚರಿ ಎಂಬಂತೆ ಬಳಿಕದ ಪಂದ್ಯಗಳಲ್ಲಿ ಗೆದ್ದು ಕಡೆಗೂ ಸೆಮಿಫೈನಲ್ ಪ್ರವೇಶ ಪಡೆಯಿತು. ಇದೀಗ ಕೂಟದ ಮೊದಲ ಸೆಮಿಫೈನಲ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಸಿಡ್ನಿ ಅಂಗಳದಲ್ಲಿ ಸೆಣಸಾಡಲು ಸಜ್ಜಾಗಿದೆ. ಈ ಪಂದ್ಯದಲ್ಲಿಯೂ ಪಾಕ್ ಗೆದ್ದು ಅಚ್ಚರಿ ಎಂಬಂತೆ ಫೈನಲ್ ಪ್ರವೇಶ ಪಡೆಯಲಿದೆಯಾ ಎಂದು ಕಾದು ನೋಡಬೇಕಿದೆ.
ಬ್ಯಾಟಿಂಗ್‌ನಲ್ಲಿ ಪಾಕ್ ದುರ್ಬಲ
ಪಾಕಿಸ್ತಾನ ತಂಡ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಾಣುತ್ತಿದೆ. ಅದರಲ್ಲೂ ನಾಯಕ ಬಾಬರ್ ಅಜಂ ಪ್ರತಿ ಪಂದ್ಯದಲ್ಲಿ ಸಿಂಗಲ್ ಡಿಜಿಟ್ ಸಂಪಾದನೆ. ಇವರ ಜತೆಗಾರ ಮೊಹಮ್ಮದ್ ರಿಜ್ವಾನ್ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿಲ್ಲ ಕೇವಲ ಒಂದೆರಡು ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೆ ದೊಡ್ಡ ಇನಿಂಗ್ಸ್ ಆಡಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಶದಾಬ್ ಖಾನ್ ಮತ್ತು ಮೊಹಮದ್ ಹ್ಯಾರಿಸ್ ಕೊಂಚ ಮಟ್ಟಿನ ಹೋರಾಟ ನಡೆಸುತ್ತಿರುವ ಕಾರಣ ತಂಡ 150 ಗಡಿ ದಾಟುವಲ್ಲಿ ಯಶಸ್ವಿಯಾಗುತ್ತಿದೆ. ಈ ಮಹತ್ವದ ಪಂದ್ಯದಲ್ಲಾದರೂ ನಾಯಕ ಬಾಬರ್ ಅಜಂ ಉತ್ತಮ ಪ್ರದರ್ಶನ ತೋರುವಲ್ಲಿ ಎಡವಿ ಪಂದ್ಯ ಸೋತರೆ ಅವರನ್ನು ನಾಯಕತ್ವದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ.
ನ್ಯೂಜಿಲೆಂಡ್ ಬಲಿಷ್ಠ
ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಡಾರ್ಕ್ ಹಾರ್ಸ್ ಖ್ಯಾತಿಯ ನ್ಯೂಜಿಲೆಂಡ್ ಈ ಬಾರಿಯ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿದೆ. ಸತತ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೆ ಒಳಗಾಗಿದ್ದ ನಾಯಕ ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ತಮ್ಮ ಹಿಂದಿನ ಬ್ಯಾಟಿಂಗ್ ಫಾರ್ಮ್ ಕಂಡುಕೊಂಡಿರುವುದು ತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ. ಉಳಿದಂದೆ ಫಿನ್ ಅಲೆನ್ ಮತ್ತು ಗ್ಲೇನ್ ಫಿಲಿಪ್ಸ್ ಕೂಡ ಉತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರಲ್ಲಿ ಒಬ್ಬ ಸಿಡಿದು ನಿಂತರೂ ಪಾಕ್ ಬೌಲರ್‌ಗಳಿಗೆ ಮಾರಿ ಹಬ್ಬ ಖಂಡಿತ. ಇನ್ನು ಬೌಲಿಂಗ್‌ನಲ್ಲಿ ಅನುಭವಿ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಕೂಡ ಉತ್ತಮ ಲಯದಲ್ಲಿದ್ದು ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಫೈನಲ್ ಅದೃಷ್ಟ ಯಾರ ಪಾಲಾಗಲಿದೆ ಎನ್ನುವುದು ಬುಧವಾರ ನಿರ್ಧಾರವಾಗಲಿದೆ.
ಇದನ್ನೂ ಓದಿ | T20 World Cup | ಈ ತಂಡ ವಿಶ್ವ ಕಪ್ ಗೆಲ್ಲುವುದು ಖಚಿತ; ಎಬಿಡಿ ಆಯ್ಕೆಯ ತಂಡ ಯಾವುದು?