Site icon Vistara News

PAK VS SA | ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್​ಗೆ 33 ರನ್​ ಗೆಲುವು; ಸೆಮಿಫೈನಲ್​ ಆಸೆ ಜೀವಂತ

t20

ಸಿಡ್ನಿ: ಟಿ20 ವಿಶ್ವ ಕಪ್‌ನ ಸೂಪರ್ 12 ಹಂತದ ದಕ್ಷಿಣ ಆಫ್ರಿಕಾ ವಿರುದ್ಧದ ಮಳೆ ಪೀಡಿತ ಪಂದ್ಯದಲ್ಲಿ ಪಾಕಿಸ್ತಾನ 33 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತನ್ನ ಸೆಮಿಫೈನಲ್ ಆಸೆಯನ್ನು ​ ಜೀವಂತವಾಗಿರಿಸಿಕೊಂಡಿದೆ. ಪಾಕ್​ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು ಬಿ ಗ್ರೂಪ್​ನ ಸೆಮಿಫೈನಲ್​ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿದೆ.

ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಗುರುವಾರ ನಡೆದ ಈ ಮುಖಾಮುಖಿಯಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಪಾಕಿಸ್ತಾನ 20 ಓವರ್​ಗಳಲ್ಲಿ 9 ವಿಕೆಟ್​ಗೆ 185 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಡಕ್​ವರ್ತ್​ ಲೂಯಿಸ್​ ನಿಯಮದನ್ವಯ 14 ಓವರ್​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 108 ರನ್​ ಗಳಿಸಿ ಶರಣಾಯಿತು.

ಬೃಹತ್​ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಕ್ಕೆ ಶಾಹಿನ್​ ಅಫ್ರಿದಿ ಆರಂಭಿಕ ಆಘಾತ ನೀಡಿದರು. ತಂಡದ ಸ್ಟಾರ್​ ಆಟಗಾರರಾದ ಕ್ವಿಂಟನ್ ಡಿ ಕಾಕ್(0) ಮತ್ತು ರಿಲೀ ರೊಸೊ(7) ಅವರ ವಿಕೆಟ್​ ಕಿತ್ತು ಪಾಕ್​ಗೆ ಆರಂಭಿಕ ಮುನ್ನಡೆ ಕಲ್ಪಿಸಿದರು. ಆದರೆ ನಾಯಕ ತೆಂಬ ಬವುಮಾ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಲು ಯತ್ನಿಸಿದರೂ 19 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಶದಾಬ್​ ಖಾನ್​ಗೆ ವಿಕೆಟ್​ ಒಪ್ಪಿಸಿದರು. ದಕ್ಷಿಣ ಆಫ್ರಿಕಾ 9 ಓವರ್ ಗಳಲ್ಲಿ 4 ವಿಕೆಟ್​ಗೆ 66 ರನ್ ಗಳಿಸಿ ಸಂಕಷ್ಟದಲ್ಲಿದ್ದಾಗ ಮಳೆ ಸುರಿಯಲಾರಂಭಿಸಿತು. ಈ ವೇಳೆ ಡಕ್​ವರ್ತ್​ ಲೂಯಿಸ್​ ನಿಯಮದ ಪ್ರಕಾರ ಪಂದ್ಯವನ್ನು 14 ಓವರ್​ಗೆ ಸೀಮಿತಗೊಳಿಸಲಾಯಿತು. ಅದರಂತೆ ದಕ್ಷಿಣ ಆಫ್ರಿಕಾ ಉಳಿದ 5 ಓವರ್ ಗಳಲ್ಲಿ ಗೆಲುವಿಗೆ 73 ರನ್ ಗಳಿಸಬೇಕಿತ್ತು. ಆದರೆ ಪಾಕಿಸ್ತಾನದ ಸಂಘಟಿತ ಬೌಲಿಂಗ್​ಗೆ ತಡೆಯೊಡ್ಡಲು ವಿಫಲವಾದ ಹರಿಣ ಪಡೆ ಅಂತಿಮವಾಗಿ ಸೋಲೊಪ್ಪಿಕೊಂಡಿತು. ಪಾಕ್​ ಪರ ಶಾಹಿನ್​ ಅಫ್ರಿದಿ ಮೂರು ವಿಕೆಟ್​ ಕಿತ್ತು ಮಿಂಚಿದರು.

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ ಪಾಕಿಸ್ತಾನ ತಂಡ ಆರಂಭಿಕ ಆಘಾತ ಎದುರಿಸಿತು. ತಂಡದ ಮೊತ್ತ 43 ಆಗುವ ವೇಳೆ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಇಫ್ತಿಕರ್​(51) ಮತ್ತು ಶಾದಾಬ್​ ಖಾನ್​(52) ಉತ್ತಮ ಹೋರಾಟ ನಡೆಸಿದ ಕಾರಣ ತಂಡ ಬೃಹತ್​ ಮೊತ್ತ ಪೇರಿಸುವಂತಾಯಿತು.

ಸಂಕ್ಷಿಪ್ತ ಸ್ಕೋರ್​

ಪಾಕಿಸ್ತಾನ: 20 ಓವರ್​ಗಳಲ್ಲಿ 9 ವಿಕೆಟ್​ಗೆ 185( ಶಾದಾಬ್​ ಖಾನ್​ 52, ಇಫ್ತಿಕರ್​ ಅಹ್ಮದ್​ 51, ಅನ್ರಿಚ್​ ನೋರ್ಜೆ 41ಕ್ಕೆ4).

ದಕ್ಷಿಣ ಆಫ್ರಿಕಾ: 14 ಓವರ್​ಗಳಲ್ಲಿ(ಡಕ್​ವರ್ತ್ ಲೂಯಿಸ್​ ನಿಯಮದ ಪ್ರಕಾರ) 9 ವಿಕೆಟ್​ಗೆ 108 (ಬವುಮಾ 36, ಶಾಹಿನ್​ ಅಫ್ರಿದಿ 14ಕ್ಕೆ3, ಶಾದಾಬ್​ ಖಾನ್​ 16ಕ್ಕೆ2).

ಇದನ್ನೂ ಓದಿ |IND VS PAK | ಬಾಂಗ್ಲಾ ಎದುರು ಭಾರತಕ್ಕೆ ​ ಗೆಲುವು; ಅಂಪೈರ್​ ಎರಾಸ್ಮಸ್ ವಿರುದ್ಧ ಪಾಕ್​ ಆಕ್ರೋಶ

Exit mobile version