ಬೆಂಗಳೂರು: ಮಳೆಯ ಅವಕೃಪೆಗೆ ತುತ್ತಾದ ಶನಿವಾರ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್(PAK vs NZ) ವಿರುದ್ಧ ಡಕ್ವರ್ತ್(DLS method) ನಿಯಮದ ಪ್ರಕಾರ 21 ರನ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಆಸೆಯನ್ನು ಜಿವಂತವಿರಿಸಿದೆ. ಸದ್ಯ ಆಡಿದ 8 ಪಂದ್ಯಗಳ ಪೈಕಿ ತಲಾ 4 ಸೋಲು ಮತ್ತು ಗೆಲುವು ದಾಖಲಿಸಿ 8 ಅಂಕದೊಂದಿಗೆ 5ನೇ ಸ್ಥಾನಕ್ಕೇರಿದೆ. ಇನ್ನೊಂದು ಪಂದ್ಯ ಬಾಕಿ ಉಳಿದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ಗೆ 401 ರನ್ ಗಳಿಸಿ ಬೃಹತ್ ಮೊತ್ತದ ಗುರಿ ನೀಡಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ ಪಾಕಿಸ್ತಾನ 6 ರನ್ಗೆ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಆದರೆ ಆರಂಭಕಾರ ಫಕಾರ್ ಜಮಾನ್ ಮತ್ತು ನಾಯಕ ಬಾಬರ್ ಅಜಂ ಅವರ ಸಿಡಿಲಬ್ಬರ ಬ್ಯಾಟಿಂಗ್ ನೆರವಿನಿಂದ ಪಾಕಿಸ್ತಾನ ಉತ್ತಮ ರನ್ಗಳಿಸಲಾರಂಭಿಸಿತು. ಇದೇ ವೇಳೆ ಮಳೆ ಅಡ್ಡಿ ಪಡಿಸಿತು.
ಎರಡನೇ ಬಾರಿ ಮಳೆ ಅಡ್ಡಿ
21.3 ಓವರ್ಗಳಲ್ಲಿ ಒಂದು ವಿಕೆಟ್ಗೆ 160 ರನ್ ಪೇರಿಸಿದ ವೇಳೆ ಮಳೆ ಬಂದು ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಈ ವೇಳೆ ಫಕಾರ್ ಜಮಾನ್ ಅವರು ಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಒಂದೊಮ್ಮೆ ಈ ವೇಳೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ ರದ್ದುಗೊಳ್ಳುತ್ತಿದ್ದರೆ ಪಾಕಿಸ್ತಾನ ತಂಡ 10 ರನ್ಗಳ ಗೆಲುವು ಸಾಧಿಸುತ್ತಿತ್ತು. ಏಕೆಂದರೆ ಡಕ್ ವರ್ತ್ ನಿಯಮದ ಪ್ರಕಾರ 21 ಓವರ್ಗಳಲ್ಲಿ 150 ರನ್ ಆಗಿರಬೇಕಿತ್ತು. ಆದರೆ ಪಾಕ್ ಇದಕ್ಕಿಂದ 10 ರನ್ ಮುಂದಿತ್ತು. ಆದರೆ ಪಂದ್ಯ ಮತ್ತೆ ಆರಂಭಗೊಂಡಿತು. ಪಂದ್ಯವನ್ನು 41 ಓವರ್ಗೆ ಸೀಮಿತಗೊಳಿಸಿ ಪಾಕ್ ಗೆಲುವಿಗೆ 342 ರನ್ ಗುರಿ ನೀಡಲಾಯಿತು.
ಮಳೆ ನಿಂತು ಪಂದ್ಯ ಆರಂಭಗೊಂಡ 4 ಓವರ್ ಆಗುವಷ್ಟರಲ್ಲಿ ಮತ್ತೆ ಮಳೆ ಸುರಿಯಿತು. ಅಂತಿಮವಾಗಿ ಡಕ್ವರ್ತ್ ಲೂಯಿಸಿ ನಿಯದ ಪ್ರಕಾರ ಪಾಕಿಸ್ತಾನ ತಂಡವನ್ನು ವಿಜಯೀ ಎಂದು ಘೋಷಿಸಲಾಯಿತು. ಪಾಕ್ 21ರನ್ಗಳ ಅಮೋಘ ಗೆಲುವು ಸಾಧಿಸಿತು. ಪಾಕ್ ತಂಡ 25.3 ಓವರ್ಗಳಲ್ಲಿ ಒಂದು ವಿಕೆಟ್ಗೆ 200rನ್ ಗಳಿಸಿತು. ಪಾಕ್ ಪರ ಫಕಾರ್ ಜಮಾನ್ 126 ಮತ್ತು ನಾಯಕ ಬಾಬರ್ ಅಜಂ 66 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದನ್ನೂ ಓದಿ PAK vs NZ: ವೇಗದ ಶತಕ ಬಾರಿಸಿ ದಾಖಲೆ ಬರೆದ ಪಾಕ್ ಡ್ಯಾಶಿಂಗ್ ಓಪನರ್ ಫಕಾರ್
ದಾಖಲೆ ಬರೆದ ಫಕಾರ್ ಜಮಾನ್
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮೂಲಕ ಚಿನ್ನಸ್ವಾಮಿ ಸ್ಟೇಡಿಯಂನ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿ ಚಚ್ಚಿದ ಫಕಾರ್ ಜಮಾನ್ ಕೇವಲ 63 ಎಸೆತದಲ್ಲಿ ಶತಕ ಬಾರಿಸಿ ಮಿಂಚಿದರು. ಈ ವೇಳೆ ಪಾಕಿಸ್ತಾನ ಪರ ವಿಶ್ವಕಪ್ನಲ್ಲಿ ಅತಿ ವೇಗದ ಶತಕ ಸಿಡಿಸಿದ ದಾಖಲೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಇಮ್ರಾನ್ ನಜೀರ್(Imran Nazir) ಹೆಸರಿನಲ್ಲಿತ್ತು. ನಜೀರ್ 2007ರ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ 95 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಈಗ ಈ ದಾಖಲೆ ಪತನಗೊಂಡಿದೆ.
ರಚಿನ್ ಶತಕ ವ್ಯರ್ಥ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಪರ ರಚಿನ್ ರವೀಂದ್ರ ಮತ್ತು ನಾಯಕ ಕೇನ್ ವಿಲಿಯಮ್ಸನ್ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. ರಚೀನ್ ಆರಂಭಿಕನಾಗಿ ಕಣಕ್ಕಿಳಿದು ಪಾಕ್ ಬೌಲರ್ಗಳಿಗೆ ಸರಿಯಾಗಿ ದಂಡಿಸಿ 94 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 108 ರನ್ ಕಲೆ ಹಾಕಿ ಶತಕ ಸಂಭ್ರಮಿಸಿದರು. ವಿಲಿಯಮ್ಸನ್ 79 ಎಸೆತಗಳಿಂದ 95 ರನ್ ಗಳಿಸಿ 5 ರನ್ ಅಂತರದಿಂದ ಶತಕ ವಂಚಿತರಾದರು.
ಸಚಿನ್ ದಾಖಲೆ ಪತನ
ರಚಿನ್ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ವಿಶ್ವಕಪ್ನ ದಾಖಲೆಯೊಂದನ್ನು ಮುರಿದರು. ಅತಿ ಕಿರಿಯ ವಯಸ್ಸಿನಲ್ಲಿ 3 ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಸಚಿನ್ ಅವರು 1996 ವಿಶ್ವಕಪ್ ಟೂರ್ನಿಯಲ್ಲಿ 2 ಶತಕ ಬಾರಿಸಿದ್ದರು. ಈ ದಾಖಲೆಯನ್ನು ರಚಿನ್ ಅವರು ಕಳೆದ ಆಸೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಸರುಗಟ್ಟಿದ್ದರು. ಇದೀಗ ಪಾಕ್ ವಿರುದ್ಧ ಶತಕ ಬಾರಿಸಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಉಭಯ ಆಟಗಾರರು ಈ ದಾಖಲೆಯನ್ನು 23 ವರ್ಷದಲ್ಲಿ ಮಾಡಿದ್ದಾರೆ.
ಕಿವೀಸ್ನ ಮೊದಲ ಆಟಗಾರ
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್ ಪರ ಮೂರು ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ರಚಿನ್ ಬರೆದಿದ್ದಾರೆ. ಅಲ್ಲದೆ ವಿಶ್ವಕಪ್ ಆವೃತ್ತಿಯೊಂದರಲ್ಲಿ 500 ರನ್ ಗಡಿ ದಾಟಿದ ನ್ಯೂಜಿಲ್ಯಾಂಡ್ನ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೇನ್ ವಿಲಿಯಮ್ಸನ್ (2019 ರಲ್ಲಿ 578) ಮತ್ತು ಮಾರ್ಟಿನ್ ಗಪ್ಟಿಲ್ (2015 ರಲ್ಲಿ 547 ) ರನ್ ಬಾರಿಸಿದ್ದರು.